ಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ಬೆಳಗಾವಿಯ ಸುವರ್ಣ ವಿಧಾನಸೌಧ ಮತ್ತೆ ಪಾಚಿಕಟ್ಟಿದೆ. ಸ್ವಚ್ಛತೆಗೆ ಅನುದಾನ ಕೊರತೆ ಎದುರಾಗಿದೆ. ಜೊತೆಗೆ 1.10 ಕೋಟಿ ವಿದ್ಯುತ್ ಬಿಲ್ ಸಹ ಕಟ್ಟಿಲ್ಲ. ಅಲ್ಲದೇ ಇಲ್ಲಿನ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು 11 ಕೋಟಿ ಅನುದಾನಕ್ಕಾಗಿ ಕಳುಹಿಸಿದ್ದ ಪ್ರಸ್ತಾವನೆಗೂ ರಾಜ್ಯ ಸರ್ಕಾರ ಸೊಪ್ಪು ಹಾಕದೇ ಇರುವುದು ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು, ಒಂದೆಡೆ ಸುವರ್ಣ ವಿಧಾನಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳ ಸ್ಥಳಾಂತರ ಆಗಿಲ್ಲ. ಮತ್ತೊಂದೆಡೆ ಸೌಧದ ನಿರ್ವಹಣೆಯನ್ನೇ ರಾಜ್ಯ ಸರ್ಕಾರ ಮರೆತಿದೆ.
ಉತ್ತರ ಕರ್ನಾಟಕ ಭಾಗದ ಜನರಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ 2012ರಲ್ಲಿ 500 ಕೋಟಿ ರೂ. ಖರ್ಚು ಮಾಡಿ ಇಲ್ಲಿ ಸೌಧವನ್ನು ಕಟ್ಟಲಾಗಿದೆ. ಅಲ್ಲದೇ ಪ್ರತಿವರ್ಷ ಕಟ್ಟಡ, ಉದ್ಯಾನ ನಿರ್ವಹಣೆ, ವಾಟರ್ ಬಿಲ್ ಸೇರಿ ಮತ್ತಿತರ ಕೆಲಸಗಳಿಗೆ 5 ಕೋಟಿ ರೂ. ಹಣ ಮೀಸಲಿಟ್ಟಿರುತ್ತಾರೆ. ಆದರೂ, ಸೌಧದಲ್ಲಿ ಸ್ವಚ್ಛತೆ ಅಷ್ಟಕ್ಕಷ್ಟೇ. ಪ್ರತಿವರ್ಷವೂ ಮಳೆಗಾಲದಲ್ಲಿ ಸೌಧ ಪಾಚಿಕಟ್ಟುತ್ತದೆ. ಇದೇ ರೀತಿ ಬೇಜವಾಬ್ದಾರಿ ಮುಂದುವರಿದರೆ ಮುಂದೊಂದು ದಿನ ಸೌಧ ಸಂಪೂರ್ಣ ಹಾಳಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಈ ಭಾಗದ
ಹೋರಾಟಗಾರರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.ಪ್ರತಿವರ್ಷವೂ ಸುವರ್ಣಸೌಧ ನಿರ್ವಹಣೆಗೆ 5 ಕೋಟಿ ರೂ. ಹಣವನ್ನು ಸರ್ಕಾರ ಬಿಡುಗಡೆಗೊಳಿಸುತ್ತದೆ. ಈ ಹಣ ಬಳಸಿ ಲೋಕೋಪಯೋಗಿ ಇಲಾಖೆ ಸುವರ್ಣಸೌಧವನ್ನು ನಿರ್ವಹಣೆ ಮಾಡುತ್ತದೆ. ಆದರೆ, ನಿರ್ವಹಣೆ ಕೊರತೆಯಿಂದ ಸೌಧದ ಕಂಬಗಳು, ಮೆಟ್ಟಿಲುಗಳು, ಮೇಲ್ಛಾವಣಿ,
ಹೊರಗಿನ ಗೋಡೆಗಳಿಗೆ ಸಂಪೂರ್ಣ ಪಾಚಿಕಟ್ಟಿದ್ದರಿಂದ ಶ್ವೇತವರ್ಣದಿಂದ ಫಳ ಫಳ ಹೊಳೆಯುತ್ತಿದ್ದ ಸೌಧ ಹಸಿರು ಬಣ್ಣಕ್ಕೆ ತಿರುಗುತ್ತಿದೆ. ಇನ್ನು ಬೆಂಗಳೂರಿನ ವಿಧಾನಸೌಧ 12 ತಿಂಗಳೂ ಫಳ ಫಳ ಹೊಳೆಯುತ್ತದೆ. ಆದರೆ, ಬೆಳಗಾವಿಯಲ್ಲಿ ಮಾತ್ರ ಅದು ಯಾಕೆ ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿ ವಿಚಾರದ ಜೊತೆಗೆ ಶಕ್ತಿ ಸೌಧಗಳ ನಿರ್ವಹಣೆಯಲ್ಲೂ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಈ ಭಾಗದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.