ರಾಜ್ಯಾದ್ಯಂತ 5.20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಳೆ ಹಾನಿ, 111 ಮಂದಿ ಸಾವು: ಸಿಎಂ ಸಿದ್ದರಾಮಯ್ಯಮಳೆಯಿಂದ ಹಾನಿಗೀಡಾಗಿರುವ ಬೆಳೆ, ಮನೆಗಳಿಗೆ ಸೂಕ್ತ ಪರಿಹಾರವನ್ನು ತಕ್ಷಣ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಡಿಸಿಗಳಿಗೆ ಸಿಎಂ ಸೂಚನೆ ನೀಡಿದರು.ರಾಜ್ಯಾದ್ಯಂತ ಮಳೆಯಿಂದ ಸುಮಾರು 5,20,663 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಏಪ್ರಿಲ್ನಿಂದ ಈವರೆಗೆ 111 ಮಂದಿ ಸಾವಿಗೀಡಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಮಳೆ ಹಾನಿ ಸಂಬಂಧ ಡಿಸಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಜೂನ್ 1ರಿಂದ ಸೆಪ್ಟೆಂಬರ್ ಮೊದಲ ವಾರದವರೆಗೆ ವಾಡಿಕೆಗಿಂತ ಶೇ.4ರಷ್ಟು ಹೆಚ್ಚು ಮಳೆಯಾಗಿದೆ. ಈ ಅವಧಿಯಲ್ಲಿ ವಾಡಿಕೆ ಮಳೆ 721ಮಿ.ಮೀ ಇದ್ದು, 753 ಮಿ.ಮೀ ಮಳೆ ದಾಖಲಾಗಿದೆ. ಕಳೆದ ವರ್ಷ ಶೇ.23ರಷ್ಟು ಹೆಚ್ಚುವರಿ ಮಳೆ ದಾಖಲಾಗಿತ್ತು. ಈ ಅವಧಿಯಲ್ಲಿ ಚಾಮರಾಜನಗರದಲ್ಲಿ ಶೇ.24ರಷ್ಟು ಕಡಿಮೆ ಮಳೆಯಾಗಿದೆ. ವಿಜಯಪುರ, ಗದಗ, ಬಾಗಲಕೋಟೆ, ದಾವಣಗೆರೆ, ತುಮಕೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಶೇ.20ಕ್ಕಿಂತ ಹೆಚ್ಚು ಮಳೆ ದಾಖಲಾಗಿದೆ ಎಂದು ವಿವರಿಸಿದರು.
ಮಳೆಯಿಂದ ಹಾನಿಗೀಡಾಗಿರುವ ಬೆಳೆ, ಮನೆಗಳಿಗೆ ಸೂಕ್ತ ಪರಿಹಾರವನ್ನು ತಕ್ಷಣ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಡಿಸಿಗಳಿಗೆ ಸೂಚನೆ ನೀಡಲಾಗಿದೆ. ಮುಂಗಾರು ಹಂಗಾಮಿನಲ್ಲಿ ಶೇ.98ರಷ್ಟು ಬಿತ್ತನೆ ಪೂರ್ಣಗೊಂಡಿದೆ. ಬಿತ್ತನೆ ಗುರಿ 82.50 ಲಕ್ಷ ಹೆಕ್ಟೇರ್ ಇದ್ದು, 80.76 ಲಕ್ಷ ಹೆಕ್ಟೇರ್ ವಾಸ್ತವಿಕ ಬಿತ್ತನೆಯಾಗಿದೆ. ಬೆಳೆ ಹಾನಿ ಬಗ್ಗೆ ಜಂಟಿ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಆದಷ್ಟು ಬೇಗನೆ ಪೂರ್ಣಗೊಳಿಸಿ 10 ದಿನದೊಳಗೆ ವರದಿ ನೀಡಲು ಸೂಚಿಸಲಾಗಿದೆ. ಹಾನಿ ಬಗ್ಗೆ ಪ್ರಾಥಮಿಕ ಸಮೀಕ್ಷೆ ನಡೆಸಲಾಗಿದ್ದು, 4,80,256 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. 40,407 ಹೆಕ್ಟೇರ್ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದ್ದು,
ಒಟ್ಟು 5,20,663 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದರು. ಮಳೆಗೆ ಸಂಬಂಧಿಸಿದಂತೆ ಏಪ್ರಿಲ್ ತಿಂಗಳಿನಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 111 ಮಂದಿ ಸಾವನ್ನಪ್ಪಿದ್ದಾರೆ. ಎಲ್ಲ ಪ್ರಕರಣಗಳಲ್ಲಿ ಪರಿಹಾರ ವಿತರಿಸಲಾಗಿದ್ದು, ಒಟ್ಟು 5.55 ಕೋಟಿ ಪರಿಹಾರ ನೀಡಲಾಗಿದೆ. 651 ಮನೆಗಳು ಸಂಪೂರ್ಣ ಹಾನಿಯಾಗಿದ್ದು, 9087 ಮನೆಗಳು ಭಾಗಶಃ ಹಾನಿಯಾಗಿವೆ. ಸಂಪೂರ್ಣ ಹಾನಿಯಾದ 649 ಮನೆಗಳಿಗೆ ಹಾಗೂ ಭಾಗಶಃ ಹಾನಿಯಾದ 8,608 ಮನೆಗಳಿಗೆ ಪರಿಹಾರ ಪಾವತಿಸಲಾಗಿದೆ. ಮನೆ ಹಾನಿಯಾದವರಿಗೆ ಪರಿಹಾರ ಹಾಗೂ ವಿವಿಧ ವಸತಿ ಯೋಜನೆಗಳಡಿ ಮನೆಯನ್ನು ಸಹ ಒದಗಿಸಲು ಕ್ರಮ ಕೈಗೊಳ್ಳಬೇಕು. ಈ ಅವಧಿಯಲ್ಲಿ ಒಟ್ಟು 766 ಜಾನುವಾರುಗಳು ಸಾವಿಗೀಡಾಗಿದ್ದು, ಒಟ್ಟು 1.52 ಕೋಟಿ ಪರಿಹಾರ ವಿತರಿಸಲಾಗಿದೆ ಎಂದು ತಿಳಿಸಿದರು.
ಮಳೆಯಿಂದಾಗಿ 683 ಕಿಮೀ ರಾಜ್ಯ ಹೆದ್ದಾರಿ, 1383 ಜಿಲ್ಲಾ ಪ್ರಮುಖ ಹೆದ್ದಾರಿ, 5558 ಗ್ರಾಮೀಣ ರಸ್ತೆಗಳು, 656 ಸೇತುವೆ/ಕಲ್ವರ್ಟ್ಗಳು, 1877 ಶಾಲಾ ಕಟ್ಟಡಗಳು, 160 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 1018 ಅಂಗನವಾಡಿಗಳು, 25279 ವಿದ್ಯುತ್ ಕಂಬಗಳು, 819 ಟ್ರಾನ್ಸ್ಫಾರ್ಮರ್ಗಳು, 31 ಸಣ್ಣ ನೀರಾವರಿ ಕೆರೆಗಳಿಗೆ ಹಾನಿ ಸಂಭವಿಸಿದೆ. ಪ್ರಾಥಮಿಕ ಅಂದಾಜು ಪ್ರಕಾರ ಸುಮಾರು 550 ಕೋಟಿ ರೂ. ಮಳೆ ಹಾನಿಯಾಗಿರುವ ಅಂದಾಜು ಮಾಡಲಾಗಿದೆ ಎಂದರು.ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಕಳೆದ ವರ್ಷಕ್ಕೆ ಹೋಲಿಸಿದರೆ ಈಗ ಸ್ವಲ್ಪ ಕಡಿಮೆಯಿದೆ. ಪ್ರಮುಖ ಜಲಾಶಯಗಳ ಗರಿಷ್ಟ ಸಾಮರ್ಥ್ಯ 895.62 ಟಿಎಂಸಿ ಇದ್ದು, ಪ್ರಸ್ತುತ 840.52 ಟಿಎಂಸಿ ಸಂಗ್ರಹವಿದೆ. ಕಳೆದ ವರ್ಷ ಈ ಅವಧಿಯಲ್ಲಿ 856.17 ಟಿಎಂಸಿ ಸಂಗ್ರಹ ಇತ್ತು. ತುಂಗಭದ್ರಾ ಜಲಾಶಯದಲ್ಲಿ ಮಾತ್ರ ಕಡಿಮೆ ನೀರು ಸಂಗ್ರಹ ಮಾಡಲಾಗಿದೆ. ಅಲ್ಲಿನ ಕ್ರಸ್ಟ್ ಗೇಟುಗಳು ಹಾನಿಯಾಗುತ್ತವೆ ಎಂಬ ವರದಿ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ 80 ಟಿಂಎಸಿ ನೀರು ನಿಲ್ಲಿಸಿದ್ದೇವೆ. ಅದರ ಸಾಮರ್ಥ್ಯ ಇರುವುದು 105 ಟಿಂಎಸಿ ಎಂದು ಮಾಹಿತಿ ನೀಡಿದರು.
ತುಂಗಾಭದ್ರಾ ಅಣೆಕಟ್ಟಿನ 32 ಕ್ರೆಸ್ಟ್ ಗೇಟ್ ಬದಲಾವಣೆಗೆ ಟೆಂಡರ್ ಆಗಿದ್ದು, 8 ಕ್ರಸ್ಟ್ ಗೇಟ್ಗಳು ಅಳವಡಿಕೆಗೆ ಸಿದ್ಧವಿದೆ ಎಂದು ಸಭೆಗೆ ಅಧಿಕಾರಿಗಳು ವಿವರಿಸಿದರು. ಮೊದಲ ಬೆಳೆಗೆ ನೀರು ಹರಿಸುವ ಮುನ್ನ ಅಗತ್ಯ ದುರಸ್ತಿ ಕಾರ್ಯಗಳನ್ನು ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದರು. ತುಂಗಾ ಭದ್ರಾ ಅಣೆಕಟ್ಟಿನಲ್ಲಿ ಪ್ರಥಮ ಬೆಳೆಗೆ ಮಾತ್ರ ನೀರು ಲಭ್ಯವಿದ್ದು, ಎರಡನೇ ಬೆಳೆಗೆ ನೀರು ಹರಿಸಲು ಪ್ರಸ್ತುತ ಸನ್ನಿವೇಶದಲ್ಲಿ ಸಾಧ್ಯವಿಲ್ಲ. ನೀರು ಹರಿಸುವ ಪೂರ್ವದಲ್ಲೇ ಎಲ್ಲ ಸಣ್ಣಪುಟ್ಟ ದುರಸ್ತಿ ಕಾರ್ಯಗಳನ್ನು ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿ ಅವರು ಸೂಚನೆ ನೀಡಿದರು.ಡಿಸಿಗಳ ಪಿಡಿ ಖಾತೆಗಳಲ್ಲಿ 1,352 ಕೋಟಿ ಹಣ ಇದೆ. ಹಣದ ಕೊರತೆ ಇಲ್ಲ. 35, 40 ಕೋಟಿಯಂತೆ ಪಿಡಿ ಖಾತೆಗಳಲ್ಲಿ ಹಣ ಇದೆ. ಬೇಕಾದರೆ ಇನ್ನಷ್ಟು ಹಣ ನೀಡಲಾಗುವುದು ಎಂದು ಇದೇ ವೇಳೆ ತಿಳಿಸಿದರು.
ವಾಡಿಕೆಗಿಂತ ಕಡಿಮೆ ಮಳೆಯಾದ ಜಿಲ್ಲೆ ಚಾಮರಾಜನಗರ. ವಾಡಿಕೆಗಿಂತ ಶೇ.24 ರಷ್ಟು ಕಡಿಮೆ ಮಳೆಯಾಗಿದೆ. ಮೈಸೂರು, ಬಳ್ಳಾರಿ, ಶಿವಮೊಗ್ಗ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಬೀದರ್, ಕೋಲಾರದಲ್ಲಿ ಮಳೆ ಕಡಿಮೆಯಾಗಿದೆ. ವಾಡಿಕೆಗಿಂತ ಶೇ.19 ರಷ್ಟು ಮಳೆ ಕಡಿಮೆಯಾದರೆ ಆ ಜಿಲ್ಲೆಗಳನ್ನು ಬರಗಾಲ ಅಂತ ಘೋಷಣೆ ಮಾಡಲು ಆಗುವುದಿಲ್ಲ. ಈ ತಿಂಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ವಾಡಿಕೆಗಿಂತ ಜಾಸ್ತಿ ಮಳೆ 6 ಜಿಲ್ಲೆಗಳು, ವಾಡಿಕೆ ಕಡಿಮೆ ಮಳೆ 24 ಜಿಲ್ಲೆ, ಕೊರತೆ 1 ಜಿಲ್ಲೆ ಮಾತ್ರ ಎಂದು ವಿವರಿಸಿದರು.ಮದ್ದೂರು ಗಲಭೆ ವಿಚಾರವಾಗಿ ಮಾತನಾಡುವ, ಮಸೀದಿ ಮುಂದೆ ಮೆರವಣಿಗೆ ಹೋದಾಗ ಗಲಾಟೆ ಆಗಿದೆ. ಲಘು ಲಾಠಿ ಪ್ರಹಾರ ಮಾಡಲಾಗಿದೆ. ಗುಂಪು ಕಟ್ಟಿ ಗಲಾಟೆ ಮಾಡಲು ಹೋದಾಗ ಲಘು ಲಾಠಿ ಪ್ರಹಾರ ಮಾಡಲಾಗಿದೆ. ಕಲ್ಲು ತೂರಾಟ ಸಂಬಂಧ 21 ಜನರನ್ನು ಬಂಧನ ಮಾಡಲಾಗಿದೆ. ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಕಾನೂನು ಕ್ರಮ ವಹಿಸಲಾಗುವುದು. ಪ್ರಚೋದನೆ ಮಾಡುವುದರಲ್ಲಿ ಬಿಜೆಪಿ ನಿಸ್ಸೀಮರು ಎಂದು ದೂರಿದರು.
ಸರ್ಕಾರ ಪತನವಾಗಲಿದೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಕುಮಾರಸ್ವಾಮಿಯವರ ಪಕ್ಷ ಪತನದ ಹಾದಿ ಹಿಡಿಯದಂತೆ ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಪ್ರತಾಪ್ ಸಿಂಹ್ ಅವರು ಬಾನು ಮುಷ್ತಾಕ್ ಸಂಬಂಧ ಕೋರ್ಟ್ ಮೊರೆ ಹೋಗಿರುವ ವಿಚಾರವಾಗಿ ಮಾತನಾಡಿ, ಕೋರ್ಟ್ ತೀರ್ಮಾನ ಮಾಡಲಿ. ನಿಸಾರ್ ಅಹಮದ್, ಮಿರ್ಜಾ ಇಸ್ಮಾಯಿಲ್ ದಸರಾ ಮಾಡುವಾಗ ಕೋರ್ಟ್ಗೆ ಹೋಗಿಲ್ಲ. ಅವರು ಪಕ್ಷದಿಂದ ನೆಗ್ಲೆಟ್ ಆಗಿರುವುದರಿಂದ ಆ ರೀತಿ ಮಾಡಿರಬೇಕು ಎಂದರು.
Laxmi News 24×7