ಉದ್ಘಾಟನೆಯಾದರೂ ಕಾರ್ಯಾರಂಭವಿಲ್ಲ: ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಮುಂದೆ ‘ಪೂಜೆ’ ಪ್ರತಿಭಟನೆ
ದೊಡ್ಡಬಳ್ಳಾಪುರ: ಅರ್ಕಾವತಿ ನದಿ ಹೋರಾಟ ಸಮಿತಿ ಹೋರಾಟದ ಫಲವಾಗಿ ಬೆಂಗಳೂರಿನಲ್ಲಿದ್ದ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರಗೊಂಡಿದೆ. ಕಚೇರಿ ಉದ್ಘಾಟಿಸಿ 12 ದಿನವಾಗಿದೆ. ಅಂದು ಕಚೇರಿಗೆ ಹಾಕಿದ ಬೀಗ ಇನ್ನೂ ತೆಗೆದಿಲ್ಲ. ಇದು ಅಧಿಕಾರಿಗಳ ನಿರ್ಲಕ್ಷ್ಯವೆಂದು ಆರೋಪಿಸಿ ಅರ್ಕಾವತಿ ನದಿ ಹೋರಾಟ ಸಮಿತಿ ಹೋರಾಟಗಾರರು ಕಚೇರಿಯ ಬಾಗಿಲಿಗೆ ಪೂಜೆ ಸಲ್ಲಿಸಿ ಅರ್ಚನೆ ಮಾಡಿ ಪ್ರತಿಭಟಿಸಿದರು.
ನಗರದ ಪ್ರವಾಸಿ ಮಂದಿರದ ವೃತ್ತದಲ್ಲಿ ತಾಲೂಕು ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಆರಂಭಿಸಲಾಗಿದೆ. ನಗರದಲ್ಲಿ ಕಚೇರಿ ಆರಂಭಿಸಿದ್ದಕ್ಕೆ ಹೋರಾಟಗಾರರು ಖುಷಿ ಪಟ್ಟಿದ್ದರು. ನದಿಗೆ ಯರ್ರಾಬಿರ್ರಿ ತ್ಯಾಜ್ಯ ಹರಿಸುವ ಕೈಗಾರಿಕೆಗಳಿಗೆ ಬಿಸಿ ಮುಟ್ಟಿಸಬಹುದು ಎಂದು ನಿರೀಕ್ಷಿಸಿದ್ದರು. ಆದರೆ, ಕಚೇರಿ ಉದ್ಘಾಟನೆಯಾಗಿ 12 ದಿನ ಕಳೆದರೂ, ಕಾರ್ಯಾರಂಭ ಮಾಡಿಲ್ಲ. ಯಾವುದೇ ಅಧಿಕಾರಿಗಳು, ಸಿಬ್ಬಂದಿ ಕಚೇರಿಯತ್ತ ತಲೆ ಕೂಡ ಹಾಕಿಲ್ಲ ಎಂದು ಹೋರಾಟಗಾರರು ಆರೋಪಿಸಿದ್ದಾರೆ.
ಕಚೇರಿಗೆ ಕುಂಬಳಕಾಯಿ ಒಡೆದು ಪೂಜೆ: ಅಧಿಕಾರಿಗಳ ನಡೆಗೆ ಬೇಸತ್ತ ಹೋರಾಟಗಾರರು ಉದ್ಘಾಟನೆಗೊಂಡು 12 ದಿನ ಕಳೆದರೂ, ಬಾಗಿಲು ತೆರೆಯದ ಕಚೇರಿಯ ಮುಂದೆ ಜಮಾಯಿಸಿ ಆರತಿ ಬೆಳಗಿ ಪೂಜೆ ಸಲ್ಲಿಸಿದ್ದಲ್ಲದೆ, ಬೂದುಕುಂಬಳಕಾಯಿ ಒಡೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಹೋರಾಟಗಾರರಾದ ವಸಂತ್, ಶುದ್ಧ ನೀರಿಗಾಗಿ ಹೋರಾಟ ಮಾಡುತ್ತಿರುವ ನಾವು ತಾಲೂಕಿನಲ್ಲಿಯೇ ಕಚೇರಿ ಆರಂಭಿಸದಿದ್ದರೆ, ಆಗಸ್ಟ್ 15 ರಂದು ಗ್ರಾಮಗಳಲ್ಲಿ ಕಪ್ಪು ಬಾವುಟ ಹಾರಿಸುವುದ್ದಾಗಿ ಎಚ್ಚರಿಕೆ ನೀಡಿದ್ದೆವು. ಇದಕ್ಕೆ ಸ್ಪಂದಿಸಿದ ಸರ್ಕಾರ ಆಗಸ್ಟ್ 20 ರಂದು ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯನ್ನ ತಾಲೂಕಿಗೆ ಸ್ಥಳಾಂತರಿಸಿ ಕಟ್ಟಡವನ್ನೂ ನೀಡಿದೆ. ಅಂದು ಕಾಟಾಚಾರಕ್ಕೆ ಕಚೇರಿಯನ್ನು ಉದ್ಘಾಟಿಸಲಾಗಿದೆ. ಪೂಜೆ ಮಾಡಿ ಹೋದ ಅಧಿಕಾರಿಗಳು ಇಲ್ಲಿಯವರೆಗೂ ಕಚೇರಿ ಬಾಗಿಲು ತೆಗಿದಿಲ್ಲ. ಅಧಿಕಾರಿಗಳು ಕಚೇರಿಗೆ ಬಂದು ಕಾರ್ಯಾರಂಭ ಮಾಡದಿದ್ದರೆ, ಮಾಲಿನ್ಯ ನಿಯಂತ್ರಣ ಮಂಡಳಿಯ ಶವಯಾತ್ರೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
Laxmi News 24×7