ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ನಾಗಾರಾಧನೆಯ ಪುಣ್ಯಕ್ಷೇತ್ರ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಹೊಸ್ತಾರೋಗಣೆ ಮತ್ತು ಕದಿರು ಕಟ್ಟುವ ಕಾರ್ಯವು ವಿವಿಧ ವೈಧಿಕ ವಿಧಿ ವಿಧಾನಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಭಾನುವಾರ ನೆರವೇರಿತು.
ಈ ನಿಮಿತ್ತ ಪ್ರಾತಃಕಾಲ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಮೂಲ ವಿಗ್ರಹಕ್ಕೆ ಪಂಚಾಮೃತ ಮಹಾಭಿಷೇಕವನ್ನು ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ನೆರವೇರಿಸಿದರು.
ತೆನೆ ಮೆರವಣಿಗೆ: ಅಭಿಷೇಕದ ಬಳಿಕ ತೆನೆ ತರಲು ಪ್ರಧಾನ ಅರ್ಚಕ ಸೀತಾರಾಮ ಅವರು ದರ್ಪಣತೀರ್ಥ ನದಿ ತೀರಕ್ಕೆ ತೆರಳಿದರು. ಬತ್ತದ ತೆನೆಗೆ ದರ್ಪಣತೀರ್ಥ ನದಿಯ ತಟದಲ್ಲಿ ವಿವಿಧ ವೈದಿಕ ವಿಧಿ ವಿಧಾನಗಳ ಮೂಲಕ ಪ್ರಧಾನ ಅರ್ಚಕರು ಪೂಜೆ ನೆರವೇರಿಸಿದರು. ಈ ವೇಳೆ ಶ್ರೀ ದೇವಳದ ಪುರೋಹಿತರು ಮಂತ್ರಘೋಷ ಮಾಡಿದರು. ಕ್ಷೇತ್ರ ಪುರೋಹಿತ ವೇದಮೂರ್ತಿ ಮದುಸೂಧನ ಕಲ್ಲೂರಾಯರು ನವಗ್ರಹ ಧ್ಯಾನ ನೆರವೇರಿಸಿದರು.
ಬಳಿಕ ಬತ್ತದ ತೆನೆಯನ್ನು ದೀವಟಿಗೆ, ಬ್ಯಾಂಡ್, ವಾದ್ಯದ ನಿನಾದದೊಂದಿಗೆ ಆನೆ, ಬಿರುದಾವಳಿಗಳ ಮೂಲಕ ಮಂತ್ರಘೋಷದೊಂದಿಗೆ ಮೆರವಣಿಗೆಯಲ್ಲಿ ದೇವಳಕ್ಕೆ ತರಲಾಯಿತು. ಶ್ರೀ ದೇವಳಕ್ಕೆ ಒಂದು ಪ್ರದಕ್ಷಿಣೆ ಹಾಕಿ ಅರ್ಚಕರು ತೆನೆಯನ್ನು ಗರ್ಭಗುಡಿಗೆ ಕೊಂಡೊಯ್ದರು. ನಂತರ ಶ್ರೀ ದೇವರ ಸನ್ನಿಧಿಯಲ್ಲಿ ಪ್ರಧಾನ ಅರ್ಚಕರು ಕದಿರು ಪೂಜೆ ನೆರವೇರಿಸಿದರು.