ಮಂಗಳೂರು: ಲಕ್ಕಿ ಸ್ಕೀಮ್ ಮೂಲಕ ಗ್ರಾಹಕರಿಂದ ಕೋಟ್ಯಂತರ ರೂ. ಸಂಗ್ರಹಿಸಿ ವಂಚನೆ ಮಾಡಿದ ಎರಡು ಸಂಸ್ಥೆಗಳ ನಾಲ್ವರು ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಅಹಮದ್ ಖುರೇಶಿ, ನಝೀರ್ ಯಾನೆ ನಾಸಿರ್, ಮುಹಮ್ಮದ್ ಅಶ್ರಫ್, ಮುಹಮ್ಮದ್ ಹನೀಫ್ ಬಂಧಿತ ಆರೋಪಿಗಳಾಗಿದ್ದಾರೆ.
ಪ್ರಕರಣ 1: ನ್ಯೂ ಶೈನ್ ಎಂಟರ್ಪ್ರೈಸಸ್ ಎಂಬ ಲಕ್ಕಿ ಸ್ಕೀಮ್ನಲ್ಲಿ 9 ತಿಂಗಳು 1,000 ರೂ. ಹಾಗೂ ಕೊನೆಯ 2 ತಿಂಗಳು 1,500 ರೂ. ಸೇರಿದಂತೆ ಒಟ್ಟು 11 ತಿಂಗಳ ಅವಧಿಗೆ ಆರೋಪಿಗಳು ಜನರಿಂದ ಹಣ ಸ್ವೀಕರಿಸಿದ್ದರು. ಅದರಂತೆ, ಲಕ್ಕಿ ಡ್ರಾನಲ್ಲಿ ಆಕರ್ಷಕ ಬಹುಮಾನ, ಬಂಪರ್ ಬಹುಮಾನಗಳಾದ ಕಾರು, ಬೈಕ್, ಪ್ಲಾಟ್, ಸೈಟ್, ಚಿನ್ನದ ಉಂಗುರಗಳು ಮತ್ತು ನಗದು ಸಿಕ್ಕಿದವರಿಗೆ ಅವುಗಳನ್ನು ಕೊಡುವುದಾಗಿ ನಂಬಿಸಿದ್ದರು. ಹೀಗೆ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸುಮಾರು 3 ಸಾವಿರ ಜನರಿಂದ 4.20 ಕೋಟಿಗೂ ಮೀರಿ ಹಣ ಸಂಗ್ರಹ ಮಾಡಲಾಗಿತ್ತು.
ಆದರೆ, ಲಕ್ಕಿ ಸ್ಕೀಮ್ ಕಂತು ಮುಗಿದ ನಂತರ ಡೆಪಾಸಿಟ್ ಮಾಡಿದ ಹಣ ಹಾಗೂ ಸರಿಯಾದ ಬಹುಮಾನಗಳನ್ನು ನೀಡದ ಆರೋಪಿಗಳು, ಕಾಟಿಪಳ್ಳ 2ನೇ ಬ್ಲಾಕ್ ಶಂಶುದ್ದೀನ್ ಸರ್ಕಲ್ ಬಳಿ ಇರುವ ನ್ಯೂ ಶೈನ್ ಎಂಟರ್ಪ್ರೈಸಸ್ ಕಚೇರಿಯನ್ನು ಏಕಾಏಕಿಯಾಗಿ ಬಂದ್ ಮಾಡಿದ್ದರು. ಈ ಸಂಬಂಧ ಆರೋಪಿಗಳಾದ ಅಹಮ್ಮದ್ ಖುರೇಶಿ (34) ಹಾಗೂ ನಝೀರ್ (39) ವಿರುದ್ಧ ಶಿವಪ್ರಸಾದ್ ಎಂಬವರು ದೂರು ನೀಡಿದ್ದರು.

ಇದೊಂದು ಅನಿಯಂತ್ರಿತ ಠೇವಣಿ ಯೋಜನೆ ಆಗಿದ್ದು, ಆರೋಪಿಗಳು ಸಂಬಂಧಪಟ್ಟ ಪ್ರಾಧಿಕಾರದಿಂದ ಯಾವುದೇ ಪೂರ್ವಾನುಮತಿ ಇಲ್ಲದೇ ಸಾರ್ವಜನಿಕರಿಂದ ಸುಮಾರು 4 ಕೋಟಿ 20 ಲಕ್ಷಕ್ಕಿಂತ ಅಧಿಕ ಹಣ ಸಂಗ್ರಹಣೆ ಮಾಡಿ ವಂಚನೆ ಮಾಡಿದ್ದರು. ನಂಬಿಕೆ ದ್ರೋಹ, ವಂಚನೆಗೈದ ಬಗ್ಗೆ ಆಗಸ್ಟ್ 16ರಂದು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿಗಳಾದ ಅಹಮ್ಮದ್ ಖುರೇಶಿ ಹಾಗೂ ನಜೀರ್ ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆಗಸ್ಟ್ 25ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಆರೋಪಿ ಖುರೇಶಿ ಹೇಳಿಕೆಯಂತೆ, ವಫಾ ಎಂಟರ್ಪ್ರೈಸಸ್ ಲಕ್ಕಿ ಸ್ಕೀಂನ ಅಬ್ದುಲ್ ವಹಾಬ್ ಮತ್ತು ಬಶೀರ್ ಇವರೊಂದಿಗೆ ಸೇರಿ ಈ ಹಿಂದೆ ನಡೆಸಿರುವ ಲಕ್ಕಿ ಸ್ಕೀಮ್ ಯೋಜನೆಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಆರೋಪಿ ಅಹಮ್ಮದ್ ಖುರೇಶಿ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 2 ಕೊಲೆ ಯತ್ನ ಪ್ರಕರಣಗಳು ಮತ್ತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ನೌಕರನಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಒಂದು ಪ್ರಕರಣ ದಾಖಲಾಗಿದೆ. ಆರೋಪಿ ನಝೀರ್ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಒಂದು ಕೊಲೆ ಯತ್ನ ಪ್ರಕರಣ ದಾಖಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಆರೋಪಿಗಳು ಆಯಿಷಾ ಕಾಂಪ್ಲೆಕ್ಸ್ನ ಕಚೇರಿ, ಬಿ.ಎಂ.ಆರ್ ಕಾಂಪ್ಲೆಕ್ಸ್ನ ಕಚೇರಿ ಹಾಗೂ ಶೈನ್ ಮಾರ್ಟ್ ಕಚೇರಿಯಲ್ಲಿ ಕೃತ್ಯಕ್ಕೆ ಉಪಯೋಗಿಸಿದ ಕಂಪ್ಯೂಟರ್ ಉಪಕರಣಗಳು, ಡ್ರಾ ಕಾಯಿನ್, ಲಕ್ಕಿ ಡ್ರಾ ಪೆಟ್ಟಿಗೆ, ರಿಜಿಸ್ಟರ್ಗಳು, ಡಿವಿಆರ್ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ, ಆರೋಪಿತರ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳು, ಚಿನ್ನಾಭರಣಗಳ ಖರೀದಿ, ನಿವೇಶನ, ವಾಹನ ಖರೀದಿ, ಮನೆ, ಕಚೇರಿಯಲ್ಲಿದ್ದ ಕಂಪ್ಯೂಟರ್ ಉಪಕರಣ ಹಾಗೂ ಇನ್ನಿತರ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ.