ಬನಹಟ್ಟಿಯಲ್ಲಿ ವಿಚಿತ್ರ ಘಟನೆ… ಅರಳಿ ಮರ ಕಡಿಯಲು ಹೋದವರಿಗೆ ಆಂಜನೇಯನ ದರ್ಶನ!
ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಸೋಮವಾರಪೇಟೆಯ ನಾಮದೇವ ಗಲ್ಲಿಯಲ್ಲಿ ಇರುವ ಹನುಮ ದೇವಾಲಯದಲ್ಲಿ ಧಾರ್ಮಿಕ ನಂಬಿಕೆಗಳನ್ನು ಪುಷ್ಟಿಪಡಿಸುವ ರೀತಿಯಲ್ಲಿ ಅಚ್ಚರಿಯ ಘಟನೆ ನಡೆದಿದೆ.
ದೇವಸ್ಥಾನದ ಜೀರ್ಣೋದ್ಧಾರದ ಭಾಗವಾಗಿ ಮುಂಭಾಗದಲ್ಲಿದ್ದ ಅರಳಿ ಮರವನ್ನು ಕಡಿದು ಕಟ್ಟಡ ನಿರ್ಮಿಸಲು ಆಡಳಿತ ಸಮಿತಿ ಮುಂದಾಗಿತ್ತು.
ಮರ ಕಡಿತದ ವೇಳೆ ಮರದ ಕಾಂಡ ಕಡಿದು, ಮುಂದಿನ ಭಾಗವನ್ನು ಕತ್ತರಿಸಲು ಪ್ರಯತ್ನಿಸಿದಾಗ ಗರಗಸ ಸೇರಿದಂತೆ ಬಳಸಿದ ಸಾಧನಗಳು ಮುರಿದುಹೋಗಿದವು. ಇದರಿಂದ ಆಶ್ಚರ್ಯಚಕಿತರಾದ ಸ್ಥಳೀಯರು ಮರದೊಳಗೆ ನೋಡಿ, ಅಲ್ಲಿ ಆಂಜನೇಯ ಸ್ವಾಮಿಯ ಚಿತ್ರ ಹೋಲುವ ಆಕೃತಿಯನ್ನು ಗಮನಿಸಿದರು.
ಈ ಘಟನೆ ಭಕ್ತರ ನಡುವೆ ಭಕ್ತಿ, ಭಾವನೆ ಹೆಚ್ಚಿಸಿ, ಸಾವಿರಾರು ಭಕ್ತರು ಸ್ಥಳಕ್ಕೆ ಹರಿದುಬಂದರು. ತಕ್ಷಣವೇ ಪೂಜೆ, ಪುನಸ್ಕಾರ ನೆರವೇರಿಸಿ ಆರಾಧನೆ ನಡೆಸಲಾಯಿತು.
ಭಕ್ತರು ಈ ಮರವನ್ನು ದೇವರ ವಾಸಸ್ಥಾನವೆಂದು ಪರಿಗಣಿಸಿ, ಮರವನ್ನು ಕಡಿಸುವ ಯೋಜನೆ ಕೈಬಿಟ್ಟಿದ್ದಾರೆ. ಅರಳಿ ಮರ ದೇವರ ನಿಲಯವೆಂದು ಭಗವದ್ಗೀತೆ ಹಾಗೂ ಸ್ಕಂದ ಪುರಾಣದಲ್ಲೂ ಉಲ್ಲೇಖವಾಗಿರುವುದು ಈ ನಂಬಿಕೆಗೆ ಮತ್ತಷ್ಟು ಬಲ ನೀಡಿದೆ.