ಬಾಗಲಕೋಟೆ : ಬಿಜೆಪಿಯವರು ಕಾಂಗ್ರೆಸ್ನ 55 ಶಾಸಕರನ್ನು ಪಟ್ಟಿ ಮಾಡಿದ್ದಾರೆ. ಬಿಜೆಪಿ ಏಜೆಂಟ್ಗಳನ್ನು ಅವರ ಮನೆಗೆ ಕಳುಹಿಸಿ ಹೆದರಿಸಿದ್ದಾರೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ್ ಆರೋಪಿಸಿದ್ದಾರೆ.
ಹುನಗುಂದ ಪಟ್ಟಣದಲ್ಲಿ ಶನಿವಾರ (ಜು.12) ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಪಟ್ಟ ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ಮಾಧ್ಯಮ ಪತ್ರಿನಿಧಿಗಳೊಂದಿಗೆ ಅವರು ಮಾತನಾಡಿದರು. ಬಿಜೆಪಿಗೆ ಬರದೇ ಹೋದ್ರೆ ಸಿಬಿಐ, ಇಡಿ ದಾಳಿ ಮಾಡಿಸಿ ಅಕ್ರಮ ಆಸ್ತಿ ಹೊರಗೆಳಸ್ತೀವಿ ಅಂತಾರೆ, ಇದಕ್ಕೆ ನಾನು ಜಗ್ಗೋದಿಲ್ಲ, ಬಗ್ಗೋದಿಲ್ಲ, ಆ ಲಿಸ್ಟ್ನಲ್ಲಿ ನಾನು ಇದ್ದರೂ ಇರಬಹುದು ಎಂದಿದ್ದಾರೆ.
ನಾನು ಅದಕ್ಕೆ ಭಯಪಟ್ಟಿಲ್ಲ, ಅವರು ಮಾಡುತ್ತಿದ್ದಾರೆ. ಮೊನ್ನೆ ನೋಡಿರಬಹುದು ನಮ್ಮ ಬಳ್ಳಾರಿ ಶಾಸಕರು, ಭರತ ರೆಡ್ಡಿ, ಸಂಸದ ತುಕಾರಾಮ್, ನಾಗೇಂದ್ರ ಅವರ ಮೇಲೆ ದಾಳಿ ಮಾಡಿದರು. ಇವೆಲ್ಲ ಉದ್ದೇಶಪೂರ್ವಕ ದ್ವೇಷದ ರಾಜಕಾರಣ, ಕುತಂತ್ರ ರಾಜಕಾರಣ. ಬಿಜೆಪಿಯವರಿಗೆ ತಾಕತ್, ಧಮ್ ಇದ್ರೆ ಜನರ ಮಧ್ಯೆ ಬರಲಿ. 2028ಕ್ಕೆ ಚುನಾವಣೆ ಆಗಲಿ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ನಲ್ಲಿ ಡಿಕೆಶಿ & ಸಿದ್ದು ಬಣದಿಂದ ಕುದುರೆ ವ್ಯಾಪಾರ ನಡೀತಿದೆ ಎಂದಿರೋ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ ಕುರಿತು ಮಾತನಾಡಿದ ಅವರು, ಬಿಜೆಪಿಯವರು ಒಮ್ಮೆಯಾದ್ರೂ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದಿದ್ದಾರಾ ಎಂದು ಪ್ರಶ್ನೆ ಮಾಡಿದರು. ಸಮ್ಮಿಶ್ರ ಸರ್ಕಾರ ಮಾಡೋದು, ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರುವುದು ಅವರಿಗೆ ರೂಢಿ. ರಾಜ್ಯದಲ್ಲಿ ಯಾವತ್ತೂ ಅವರಿಗೆ ನಿಚ್ಚಳ ಬಹುಮತ ಇರಲಿಲ್ಲ ಎಂದು ಕಾಶಪ್ಪನವರ್ ಟೀಕಿಸಿದರು.
ಇದೆಲ್ಲಾ ಜನರಿಗೆ ಗೊತ್ತಿದೆ. ಬಿಜೆಪಿಗರು ಯಾವತ್ತೂ ಅಧಿಕಾರಕ್ಕೆ ಬರೋದಿಲ್ಲ. ಅದು ಅವರಿಗೆ ಗೊತ್ತಾಗಿದೆ. ಹಾಗಾಗಿ ಅವರು ಕುತಂತ್ರ ರಾಜಕಾರಣವನ್ನೇ ಮಾಡಬೇಕು. ಇವತ್ತು ಕೂಡ ಅದೇ ತಂತ್ರವನ್ನು ಹೂಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಯಾರನ್ನಾದ್ರೂ ಎತ್ತಿ ಕಟ್ಟಿ ಸರ್ಕಾರ ಬೀಳಿಸೋ ಪ್ರಯತ್ನ ಮಾಡೋದು. ಸಿಬಿಐ, ಇಡಿ ದಾಳಿಗಳ ಮೂಲಕ ಹೆದರಿಸೋಕೆ ಮಾಡ್ತಿದ್ದಾರೆ. ಬಿಜೆಪಿಗೆ ಕಾಂಗ್ರೆಸ್ ಶಾಸಕರು ಬರದೇ ಹೋದ್ರೆ ಇಡಿ, ಸಿಬಿಐ ದಾಳಿಯಿಂದ ಹೆದರಿಸಿದ್ದಾರೆ. ಹಾಗಾಗಿ ನನ್ನನ್ನು ಸೇರಿ ನಮ್ಮೆಲ್ಲ ಶಾಸಕರಿಗೆ ಭಯ ಇದೆ. ನನ್ನ ಮೇಲೆ ಇಡಿ ದಾಳಿಯಾದ್ರೂ ಮಾಡಲಿ ಐಬಿಯಾದ್ರೂ ದಾಳಿ ಆದ್ರೂ ಆಗಲಿ, ಎಲ್ಲವನ್ನು ಎದುರಿಸಲು ನಾನು ಸಜ್ಜಾಗಿದ್ದೇನೆ ಎಂದು ಅವರು ಹೇಳಿದರು.