ಬೆಂಗಳೂರು, ಜುಲೈ 11: ಸಾರ್ವಜನಿಕರ ಆರೋಗ್ಯದ ದೃಷ್ಠಿಯಿಂದ ಆಹಾರ ಇಲಾಖೆ (Food Department) ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಹೊಟೇಲ್ (Hotel), ರೆಸ್ಟೋರೆಂಟ್, ಬೀದಿ ಬದಿ ವ್ಯಾಪಾರ ಘಟಕಗಳಲ್ಲಿ ಪರಿಶೀಲನೆ ನಡೆಸಿದೆ. ಆಹಾರ ಇಲಾಖೆ ಅಧಿಕಾರಿಗಳ ಪರಿಶೀಲನೆ ವೇಳೆ ಕಳಪೆ ಗುಣಮಟ್ಟದ ಆಹಾರ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆಯು ಹೊಟೇಲ್, ರೆಸ್ಟೋರೆಂಟ್ ಮತ್ತು ಬೀದಿ ಬದಿ ವ್ಯಾಪಾರ ಘಟಕಗಳಿಗೆ ನೋಟಿಸ್ ನೀಡಿ, ದಂಡ ವಿಧಿಸಿದೆ.
ಆಹಾರ ಇಲಾಖೆಯು ರಾಜ್ಯಾದ್ಯಂತ 720 ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಪರಿಶೀಲನೆ ನಡೆಸಿದೆ. 183 ಘಟಕಗಳಿಗೆ ನೋಟಿಸ್ ನೀಡಿ, 21,500 ರೂ. ದಂಡ ವಿಧಿಸಿದೆ. ರಾಜ್ಯಾದ್ಯಂತ 1,557 ಬೀದಿಬದಿ ವ್ಯಾಪಾರ ಘಟಕಗಳನ್ನು ಪರಿಶೀಲಿಸಿ 406 ಘಟಕಗಳಿಗೆ ನೋಟಿಸ್ ನೀಡಿ 44,500 ದಂಡ ವಿಧಿಸಲಾಗಿದೆ. 866 ಘಟಕಗಳಿಗೆ ಉಚಿತ ನೋಂದಣಿ ಒದಗಿಸಲಾಗಿದ್ದು, 1,240 ಬೀದಿಬದಿ ಆಹಾರ ವ್ಯಾಪಾರಿಗಳಿಗೆ ತರಬೇತಿ ನೀಡಲಾಗಿದೆ ಎಂದು ಆಹಾರ ಇಲಾಖೆ ತಿಳಿಸಿದೆ.
184 ಬಸ್ ನಿಲ್ದಾಣಗಳಲ್ಲಿನ 871 ಆಹಾರ ಮಳಿಗೆಗಳನ್ನು ಪರಿವೀಕ್ಷಿಸಿ, 216 ಘಟಕಗಳಿಗೆ ನೋಟಿಸ್ ನೀಡಿ 55,000 ದಂಡ ವಿಧಿಸಲಾಗಿದೆ. 95 ಆಹಾರ ಮಾದರಿಗಳನ್ನು ವಿಶ್ಲೇಷಣೆಗಾಗಿ ಸಂಗ್ರಹಿಸಲಾಗಿದೆ. 234 ಕುಡಿಯುವ ನೀರಿನ ಮಾದರಿಗಳನ್ನು ವಿಶ್ಲೇಷಣೆಗಾಗಿ ಸಂಗ್ರಹಿಸಲಾಗಿದೆ. ಹೆಚ್ಚಿನ ಅಪಾಯದ ಹೈ ರಿಸ್ಕ್ ವರ್ಗದಡಿ ಬರುವ 1,492 ಆಹಾರ ಉದ್ದಿಮೆಗಳನ್ನು ತಪಾಸಣೆ ಮಾಡಿದ್ದು 415 ಉದ್ದಿಮೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. 604 ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ 541 ಆಹಾರ ಮಾದರಿಗಳನ್ನು ವಿಶ್ಲೇಷಣೆಗಾಗಿ ಸಂಗ್ರಹಿಸಲಾಗಿದೆ ಹಾಗೂ 903 ಅಂಗನವಾಡಿ ಕೇಂದ್ರಗಳಿಗೆ ಉಚಿತ ನೋಂದಣಿ ಒದಗಿಸಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.