ಬೆಂಗಳೂರು: ಪತ್ನಿ ಶಾಪಿಂಗ್ಗೆ ಹೋಗಿ ಬಂದಿದ್ದಕ್ಕೆ ತಗಾದೆ ತೆಗೆದು ಕತ್ತು ಹಿಸುಕಿ ಹತ್ಯೆಗೈದಿದ್ದ ಪತಿಯನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹರೀಶ್ ಬಂಧಿತ ಆರೋಪಿ. ಪದ್ಮಜಾ (29) ಕೊಲೆಯಾದವರು.
ಜುಲೈ 6ರಂದು ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಮರುದಿನ ಆಸ್ಪತ್ರೆಯಿಂದ ಬಂದ ಮಾಹಿತಿ ಆಧರಿಸಿ ಪೊಲೀಸರು ತನಿಖೆ ನಡೆಸಿದ್ದರು.
ಕೋಲಾರದ ಶ್ರೀನಿವಾಸಪುರ ಮೂಲದ ದಂಪತಿ ಇಬ್ಬರು ಮಕ್ಕಳೊಂದಿಗೆ ಬೊಮ್ಮನಹಳ್ಳಿಯಲ್ಲಿ ನೆಲೆಸಿದ್ದರು. ಪದ್ಮಜಾ ಅವರು ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯುನಿಕೇಶನ್ಸ್ ವಿಭಾಗದಲ್ಲಿ ಬಿಇ ಪದವೀಧರೆಯಾಗಿದ್ದರೆ, ಹರೀಶ್ ಸಿವಿಲ್ ಇಂಜಿನಿಯರಿಂಗ್ ಪದವೀಧರನಾಗಿದ್ದ. ಉದ್ಯೋಗವಿಲ್ಲದ ಹರೀಶ್ ಪಾನಮತ್ತನಾಗಿ ಬಂದು ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಹತ್ತು ದಿನಗಳ ಹಿಂದೆ ಕೆಲಸಕ್ಕೆ ಸೇರಿದ್ದ ಹರೀಶ್, ಜುಲೈ 6ರಂದು ಶಾಪಿಂಗ್ ಹೋಗಿ ಬಂದ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಈ ವೇಳೆ ಇಬ್ಬರ ನಡುವಿನ ವಾಗ್ವಾದ ವಿಕೋಪಕ್ಕೆ ತಿರುಗಿ, ಹರೀಶ್ ಪತ್ನಿಯನ್ನು ಬೀಳಿಸಿ ಕತ್ತು ಹಿಸುಕಿ ಹತ್ಯೆಗೈದಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 7ರಂದು ಆಸ್ಪತ್ರೆಯಿಂದ ಬಂದ ಮಾಹಿತಿ ಆಧರಿಸಿ ತನಿಖೆ ಕೈಗೊಂಡಾಗ ಅಪ್ಪ ಗಲಾಟೆ ಮಾಡಿ ಅಮ್ಮನ ಮೇಲೆ ಹಲ್ಲೆಗೈದಿದ್ದ ವಿಚಾರವನ್ನು ಮಗು ತಿಳಿಸಿತ್ತು. ಅಕ್ಕಪಕ್ಕದವರಿಂದ ಮಾಹಿತಿ ಕಲೆ ಹಾಕಿ ಹರೀಶ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆತ ಹತ್ಯೆಯ ವಿಚಾರ ಬಾಯ್ಬಿಟ್ಟಿದ್ದಾನೆ ಎಂದು ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ತಿಳಿಸಿದ್ದಾರೆ.