ಬೆಂಗಳೂರು: ನಗರದಲ್ಲಿ ಮಹಿಳೆ ಮೇಲೆ ಸಾಮೂಹಿಕ ಆತ್ಯಾಚಾರವೆಸಗಿ ಬಳಿಕ ಹಣ ಸುಲಿಗೆ ಮಾಡಿದ್ದಲ್ಲದೆ ಮನೆಯಲ್ಲಿದ್ದ ಪಿಠೋಪಕರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ಧಾರೆ.
35 ವರ್ಷದ ಮಹಿಳೆ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ರಘು, ಕೆಂಚೇಗೌಡ ಹಾಗೂ ಮಾದೇಶ್ ಎಂಬುವರನ್ನು ಬಂಧಿಸಿದ್ದಾರೆ. ಬಂಧಿತರೆಲ್ಲರೂ ಹೆಬ್ಬಗೋಡಿ ಸುತ್ತಮುತ್ತಲಿನ ನಿವಾಸಿಗಳಾಗಿದ್ದಾರೆ. ದೊಡ್ಡನಾಗಮಂಗಲದ ಲೇಔಟ್ನಲ್ಲಿರುವ ಮನೆಯೊಂದರಲ್ಲಿ ಜುಲೈ 7ರಂದು ಸಂಜೆ ಈ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ಧಾರೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸಂತ್ರಸ್ತೆ, ನಗರದ ನಿವಾಸಿಯಾಗಿದ್ದಾರೆ. ಜುಲೈ 7ರಂದು ಆಕೆ ತನ್ನ ಸ್ನೇಹಿತನ ಮನೆಯಲ್ಲಿರುವಾಗ ಆರೋಪಿಗಳು ಎಂಟ್ರಿ ಕೊಟ್ಟಿದ್ದಾರೆ. ಪೊಲೀಸರಿಗೆ ದೂರು ನೀಡುವುದಾಗಿ ಮಹಿಳೆ ಮತ್ತು ಆಕೆಯ ಸ್ನೇಹಿತನನ್ನು ಬೆದರಿಸಿ ಮಹಿಳೆ ಮೇಲೆ ಸಾಮೂಹಿಕ ಆತ್ಯಾಚಾರವೆಸಗಿದ್ಧಾರೆ. ಈ ದುಷ್ಕೃತ್ಯದ ಬಳಿಕ ಅವರಿಂದ 20 ಸಾವಿರ ಹಣ ಸುಲಿಗೆ ಮಾಡಿ ಬೆಟ್ಟಿಂಗ್ ಆ್ಯಪ್ ವ್ಯಾಲೆಟ್ ವೊಂದಕ್ಕೆ ಹಣ ಹಾಕಿಸಿಕೊಂಡಿದ್ಧಾರೆ. ಅಲ್ಲದೆ, ಮನೆಯಲ್ಲಿದ್ದ ಫ್ರಿಡ್ಜ್ ಹಾಗೂ ವಾಷಿಂಗ್ ಮಷಿನ್, ಎರಡು ಮೊಬೈಲ್ ಸೇರಿದಂತೆ ಮನೆಯಲ್ಲಿದ್ದ ಪೀಠೋಪಕರಣ ದೋಚಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ಧಾರೆ.ಸಂತ್ರಸ್ತೆಯು ಸ್ನೇಹಿತನ ಮನೆಗೆ ಹೋಗುವಾಗ ಮೂವರು ಆರೋಪಿಗಳು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿದ್ದಾರೆ. ಬಳಿಕ ಸ್ನೇಹಿತನ ಮನೆಗೆ ಹೋಗಿ ಮಹಿಳೆಯನ್ನು ಬೆದರಿಸಿ ಈ ಕೃತ್ಯ ಎಸಗಿದ್ಧಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಈ ಹಿಂದೆ ಅಪರಾಧ ಪ್ರಕರಣಗಳು ದಾಖಲಾಗಿವೆಯಾ ಎಂಬುದರ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ಧಾರೆ