ಬೆಂಗಳೂರು: ಮನೆ ಕೆಲಸದಾಕೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಹೈಕೋರ್ಟ್ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಿ ಆದೇಶಿಸಿತು.
ಸುಪ್ರೀಂ ಕೋರ್ಟ್ ಆದೇಶಗಳ ಪ್ರಕಾರ ಮೊದಲಿಗೆ ವಿಚಾರಣಾಧೀನ ನ್ಯಾಯಾಲಯದಲ್ಲಿ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ಸಲ್ಲಿಸಬೇಕು. ಈ ಅರ್ಜಿಯನ್ನು ವಿಚಾರಣಾಧೀನ ನ್ಯಾಯಾಲಯ ಮುಂದಿನ 10 ದಿನಗಳಲ್ಲಿ ನಿರ್ಧರಿಸಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.
ಅತ್ಯಾಚಾರ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಎರಡನೇ ಬಾರಿಗೆ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣ ಕುಮಾರ್ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿತು. ಅಲ್ಲದೆ, ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿಯ ಆದೇಶದಂತೆ ಪಕ್ಷಗಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಬಹುದು ಎಂದು ತಿಳಿಸಿದ ಪೀಠ ಅರ್ಜಿ ಇತ್ಯರ್ಥಪಡಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸುಪ್ರೀಂ ಕೋರ್ಟ್‌ನ ವಿವಿಧ ತೀರ್ಪುಗಳನ್ನು ಉಲ್ಲೇಖಿಸಿ, ಜಾಮೀನು ಕೋರಿ ಎರಡನೇ ಬಾರಿ ಸಲ್ಲಿಕೆಯಾಗುವ ಅರ್ಜಿಗಳನ್ನು ಸೆಷನ್ಸ್ ನ್ಯಾಯಾಲಯದಲ್ಲಿಯೇ ಸಲ್ಲಿಸಬೇಕು ಎಂಬ ನಿಯಮವಿಲ್ಲ. ಹೈಕೋರ್ಟ್‌ನಲ್ಲೇ ಸಲ್ಲಿಸುವುದಕ್ಕೆ ಅವಕಾಶವಿದೆ ಎಂದು ತಿಳಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ವಕೀಲರು, ಅರ್ಜಿದಾರರು ಮೊದಲ ಬಾರಿ ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯದಲ್ಲಿ ಸಲ್ಲಿಸಿದ್ದರು. ಎರಡನೇ ಬಾರಿಯೂ ಅಲ್ಲಿಯೇ ಸಲ್ಲಿಸಬೇಕು. ಅದಕ್ಕೆ ಬದಲಾಗಿ ರೋಸ್ಟರ್ ಪೀಠಕ್ಕೆ ಸಲ್ಲಿಸುವುದಕ್ಕೆ ಅವಕಾಶವಿಲ್ಲ. ಈ ಸಂಬಂಧ ಹೈಕೋರ್ಟ್ ಸುತ್ತೋಲೆ ಹೊರಡಿಸಿದೆ ಎಂದು ವಿವರಿಸಿದರು.
ಕಳೆದ ವಿಚಾರಣೆಯಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾದ ಪ್ರೊ.ರವಿವರ್ಮ ಕುಮಾರ್, ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಆರೋಪಿಯು ಮೊದಲಿಗೆ ವಿಚಾರಣಾಧೀನ ನ್ಯಾಯಾಲಯದಲ್ಲಿ ಜಾಮೀನು ಕೋರಬೇಕು. ಅಲ್ಲಿನ ಅರ್ಜಿ ವಜಾಗೊಂಡ ಬಳಿಕ ಹೈಕೋರ್ಟ್‌ಗೆ ಬರಬಹುದು. ಆದರೆ, ಹಾಲಿ ಪ್ರಕರಣದಲ್ಲಿ ನೇರವಾಗಿ ಹೈಕೋರ್ಟ್‌ಗೆ ಬಂದಿರುವುದರಿಂದ ಅವರ ಅರ್ಜಿಯನ್ನು ಪುರಸ್ಕರಿಸಬಾರದು ಎಂದು ಕೋರಿದ್ದರು.
ಈ ಹಿಂದೆ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಅರ್ಜಿದಾರರ ವಿರುದ್ಧ ಗಂಭೀರ ಆರೋಪಗಳಿದ್ದು, ಸಾಕ್ಷಿಗಳನ್ನು ನಾಶಪಡಿಸುವ ಸಾಧ್ಯತೆಯಿದೆ ಎಂದು ತಿಳಿಸಿ ಅರ್ಜಿ ವಜಾಗೊಳಿಸಿತ್ತು. ಇದಾದ ಬಳಿಕ ಅವರು ಎರಡನೇ ಬಾರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.