ಬೆಳಗಾವಿ: ಐಐಟಿಯ ಆಧುನಿಕ ತಂತ್ರಜ್ಞಾನ ಸಂಶೋಧನೆಗಳು, ಹೊಸ ಕಲಿಕೆಯ ಅವಕಾಶ, ಅನ್ವೇಷಣೆಗಳು, ಅಲ್ಲಿನ ಪರಿಸರದಿಂದ ವಿದ್ಯಾರ್ಥಿಗಳಲ್ಲಿ ಹೊಸ ದೃಷ್ಟಿ ಮೂಡಬೇಕು. ಐಐಟಿ ಸೇರಬೇಕೆಂಬ ಹಾಗು ಹೊಸ ನಾವೀನ್ಯತೆಗೆ ಮುಂದಾಗಲು ಪ್ರೇರೇಪಿಸುವ ಉದ್ದೇಶದಿಂದ ಜಿಲ್ಲೆಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳನ್ನು ಒಂದು ದಿನದ ಶೈಕ್ಷಣಿಕ ಪ್ರವಾಸಕ್ಕಾಗಿ ಧಾರವಾಡ ಐಐಟಿಗೆ ಬೆಳಗಾವಿ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂಧೆ ಕಳುಹಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಜಿಲ್ಲೆಯ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಧಾರವಾಡ ಐಐಟಿಗೆ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಈ ವಿದ್ಯಾರ್ಥಿಗಳ ಪ್ರವಾಸಕ್ಕೆ ಇಂದು ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂಧೆ ಹಸಿರು ನಿಶಾನೆ ತೋರಿ ಬೀಳ್ಕೊಟ್ಟರು. ವಿದ್ಯಾರ್ಥಿಗಳ ಪ್ರವಾಸಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಹರ್ಷ ಸಾಥ್ ನೀಡಿದ್ದಾರೆ.