ರಾಯಚೂರು : ಜಿಲ್ಲೆಯ ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರದಂದು ಇಬ್ಬರು ಮಹಿಳೆಯರಿಗೆ ಹೆರಿಗೆಯಾಗಿದ್ದು, ಇವೆರಡು ಮಕ್ಕಳನ್ನು ಸಿಬ್ಬಂದಿ ಅದಲು-ಬದಲು ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಮಸ್ಕಿ ತಾಲೂಕಿನ ಗ್ರಾಮದವರಾದ ತಿಮ್ಮಣ್ಣ ಪತ್ನಿಗೆ ಹಾಗೂ ಮುದುಗಲ್‌ನ ರೇವತಿ ಎಂಬುವರಿಗೆ ಶನಿವಾರ ಹೆರಿಗೆ ಆಗಿದೆ.ಈ ಕುರಿತು ರೇವತಿ ಪತಿ ಹುಲ್ಲಪ್ಪ ಅವರು ಮಾತನಾಡಿದ್ದು, ‘ಆಸ್ಪತ್ರೆಯಲ್ಲಿ ಇಬ್ಬರು ಮಹಿಳೆಯರಿಗೆ ಹೆರಿಗೆ ಮಾಡಿಸಲಾಯಿತು. ಐದು ನಿಮಿಷ ಮುಂಚೆ ಆಸ್ಪತ್ರೆ ಸಿಬ್ಬಂದಿ ನಮ್ಮನ್ನು ಕರೆದು ಗಂಡು ಮಗು ಎಂದು ಕೊಟ್ಟಿದ್ದಾರೆ. 10-15 ನಿಮಿಷದ ನಂತರ ನಿಮ್ಮದು ಗಂಡು ಮಗುವಲ್ಲ, ಹೆಣ್ಣು ಮಗು ಎಂದು ಹೇಳುತ್ತಿದ್ದಾರೆ. ಅದಕ್ಕೆ ಡಿಎನ್ಎ ಟೆಸ್ಟ್ ಮಾಡಿಸಿ, ನಮ್ಮದು ಯಾವ ಮಗುವಿದೆ ಅದನ್ನು ಕೊಡಿ ಎಂದು ಕೇಳುತ್ತಿದ್ದೇವೆ. ಅದಕ್ಕೆ ಅವರು ಏನೂ ರೆಸ್ಪಾನ್ಸ್ ಮಾಡುತ್ತಿಲ್ಲ. ಬೆಳಗ್ಗೆಯಿಂದ ಕಾಯುತ್ತಿದ್ದೇವೆ. ನಮಗೆ ಇಲ್ಲಿ ಯಾವುದೇ ಕ್ಲಿಯರ್ ಮಾಹಿತಿ ಸಿಗುತ್ತಿಲ್ಲ’ ಎಂದು ಹೇಳಿದ್ದಾರೆ.ಈ ಬಗ್ಗೆ ರೇವತಿ ತಾಯಿ ನೀಲಮ್ಮ ಅವರು ಮಾತನಾಡಿದ್ದು, ‘ಹೆರಿಗೆಯಾದ ನಂತರ ಆಸ್ಪತ್ರೆ ಸಿಬ್ಬಂದಿ ಮಗುವನ್ನು ಕೊಡಲು ನಮ್ಮ ಹೆಸರನ್ನು ಕರೆದರು. ನಂತರ ನಾವು ಹೋಗಿ ಮಗುವನ್ನು ಎತ್ತಿಕೊಂಡೆವು. ಸ್ವಲ್ಪ ಸಮಯದ ನಂತರ ನಿಮ್ಮ ಮಗು ಗಂಡು ಅಲ್ಲ, ಹೆಣ್ಣು ಎಂದರು. ನಾನು ಹೆರಿಗೆಯಾದಾಗ ಗಂಡು ಮಗುವನ್ನು ನೋಡಿದ್ದೇವೆ’ ಎಂದಿದ್ದಾರೆ.