ಬೆಂಗಳೂರು: ವೀರಶೈವ ಲಿಂಗಾಯಿತ ಧರ್ಮದಲ್ಲಿರುವ ಜಂಗಮರು ‘ಬೇಡ’ ಅಥವಾ ‘ಬುಡ್ಗ’ ಜಂಗಮರಲ್ಲ. ಲಿಂಗಾಯಿತರಲ್ಲಿನ ಜಂಗಮರು ತಾವು ಬೇಡ ಅಥವಾ ಬುಡ್ಗ ಜಂಗಮರೆಂದು ತಿಳಿಸಿ, ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದು ಮೀಸಲು ದುರ್ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಕಲಬುರಗಿ ಪೀಠದಲ್ಲಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಹಾಗೂ ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ್ ಅವರಿದ್ದ ಕಲಬುರಗಿಯ ನ್ಯಾಯಪೀಠ ಈ ಆದೇಶ ಮಾಡಿದೆ.
ಬುಡ್ಗ ಅಥವಾ ಬೇಡ ಜಂಗಮರು ಅಲೆಮಾರಿಗಳು: ಮೈಸೂರು ಗೆಜೆಟಿಯರ್‌ನಲ್ಲಿ ಬಿ.ಎಲ್.ರೈಸ್ ಹೇಳಿರುವಂತೆ ಜಂಗಮರೆಂದರೆ ಯಾರು ಎನ್ನುವ ವ್ಯಾಖ್ಯಾನವನ್ನು ತನ್ನ ಆದೇಶದಲ್ಲಿ ಉಲ್ಲೇಖಿಸಿ, ಲಿಂಗಾಯಿತರಲ್ಲಿನ ಜಂಗಮರೆಂದರೆ ಪ್ರೀಸ್ಟ್ಲಿಕಾಸ್ಟ್ ಅವರನ್ನು ಆರಾಧ್ಯರೆನ್ನುತ್ತಾರೆ. ಅವರು ಲಿಂಗಾಯಿತರಲ್ಲಿನ ಬ್ರಾಹ್ಮಣರೆಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ ಸಂಸ್ಕೃತಿ ಮತ್ತು ಮಾನವಶಾಸ್ತ್ರ ಇಲಾಖೆಯ ಸಲಹೆಗಾರ ಕೆ.ಎಸ್.ಸಿಂಗ್ ಅವರನ್ನು ವಿಚಾರಣೆಗೊಳಪಡಿಸಲಾಗಿದೆ. ಬುಡ್ಗ ಅಥವಾ ಬೇಡ ಜಂಗಮರು ಅಲೆಮಾರಿಗಳಾಗಿದ್ದು, ಅವರು ರಾಜ್ಯದ ಆಂಧ್ರ ಗಡಿ ಭಾಗದ ಜಿಲ್ಲೆಗಳಲ್ಲಿ ಅಂದರೆ ಬೀದರ್, ಕಲಬುರಗಿ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಕಂಡು ಬರುತ್ತಾರೆ. ಅವರೇ ಬೇರೆ ಹಾಗೂ ಲಿಂಗಾಯಿತರಲ್ಲಿನ ಜಂಗಮರೇ ಬೇರೆ ಎಂದು ತಿಳಿಸಿರುವ ಅಂಶವನ್ನು ಪೀಠ ಆದೇಶದಲ್ಲಿ ಉಲ್ಲೇಖಿಸಿದೆ.
ವೀರಶೈವರಲ್ಲಿನ ಜಂಗಮರು ಪೂಜಿಸುವ ವರ್ಗದವರು ಮತ್ತು ಅವರು ಸಸ್ಯಾಹಾರಿಗಳು. ಆದರೆ, ಬೇಡ ಜಂಗಮರು ಸಮಾಜದಲ್ಲಿ ಕೆಳ ಜಾತಿಗೆ ಸೇರಿದವರು ಮತ್ತು ಅವರನ್ನು ಅಸ್ಪೃಶ್ಯರೆಂದು ಪರಿಗಣಿಸಲಾಗುತ್ತದೆ ಎಂದು ಪೀಠ ತನ್ನ ಆದೇಶದಲ್ಲಿ ವಿವರಿಸಿದೆ.