ಅಪಘಾತದ ಕಥೆ ಕಟ್ಟಿ ಹಣ ಸುಲಿಗೆ; ವಯೋವೃದ್ಧ ಕಾರು ಚಾಲಕರೇ ಈತನ ಟಾರ್ಗೆಟ್!
ಬೆಂಗಳೂರು: ವಯೋವೃದ್ಧ ಕಾರು ಚಾಲಕರನ್ನು ಗುರಿಯಾಗಿಸಿ ಅಪಘಾತವೆಸಗಿರುವುದಾಗಿ ಬೆದರಿಸಿ ಸುಲಿಗೆ ಮಾಡುತ್ತಿದ್ದ ಸುಲಿಗೆಕೋರನನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಶಾಂತಿನಗರದ ಭಂಗಿಯಪ್ಪ ಗಾರ್ಡನ್ ನಿವಾಸಿ ಚಂದ್ರಶೇಖರ್ (78 ವರ್ಷ) ಎಂಬವರು ನೀಡಿದ ದೂರಿನ ಮೇರೆಗೆ ಆರೋಪಿ ಜಮೀಲ್ ಖಾನ್ ಎಂಬಾತನನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರವಾಹನ ಹಾಗೂ ಮೊಬೈಲ್ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 2ರಂದು ಎಂ.ಜಿ.ರಸ್ತೆಯ ತಮ್ಮ ವ್ಯಾಗನರ್ ಕಾರಿನಲ್ಲಿ ಬರುವಾಗ ಹಿಂಬದಿಯಿಂದ ಬಂದ ವ್ಯಕ್ತಿಯು ನಿಮ್ಮ ಕಾರು ನನ್ನ ಸ್ಕೂಟರ್ಗೆ ಟಚ್ ಆಗಿದೆ. ಇದರಿಂದ ನನ್ನ ತಮ್ಮನಿಗೆ ಗಾಯವಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಕಂಪೆನಿಯೊಂದರಲ್ಲಿ ಮಾಸಿಕ 37 ಸಾವಿರ ರೂ. ವೇತನ ಪಡೆಯುತ್ತಿದ್ದ. ನನ್ನ ತಮ್ಮನಿಗೆ ಮೂರು ತಿಂಗಳು ಚಿಕಿತ್ಸೆ ಕೊಡಿಸಬೇಕಿದೆ. ಹೀಗಾಗಿ 1 ಲಕ್ಷ ಹಣ ನೀಡುವಂತೆ ಸುಳ್ಳು ಹೇಳಿ ಬೆದರಿಕೆ ಹಾಕಿ, 5 ಸಾವಿರಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದ್ದನೆಂದು ಆರೋಪಿಸಿ ಚಂದ್ರಶೇಖರ್ ದೂರು ನೀಡಿದ್ದರು. ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಜಮೀಲ್ ಖಾನ್ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ವಿರುದ್ಧ 19 ಪ್ರಕರಣ: ಆರೋಪಿಯು ವಯಸ್ಸಾದ ಅಮಾಯಕ ಚಾಲಕರನ್ನ ಗುರಿಯಾಗಿಸಿಕೊಂಡು ರೂಢಿಗತವಾಗಿ ಅಪರಾಧ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದ. ಮೈಸೂರಿನ ರಾಜೇಂದ್ರನಗರದ ಮೂಲದ ಆರೋಪಿಯು 2018ರಿಂದ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದ. ಮೈಸೂರು, ಮಂಡ್ಯ, ಶ್ರೀರಂಗಪಟ್ಟಣ, ಮದ್ದೂರು ರಾಮನಗರ ಹಾಗೂ ಬೆಂಗಳೂರು ನಗರ ಸೇರಿದಂತೆ ಆರೋಪಿ ವಿರುದ್ಧ ಒಟ್ಟು 19 ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.