ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 24ನೇ ಅವಧಿಗೆ ಮಹಾಪೌರ ಹಾಗೂ ಉಪ ಮಹಾಪೌರರ ಸ್ಥಾನಗಳಿಗೆ ಜೂನ್ 30 ರಂದು ಬೆಳಗ್ಗೆ 9 ಗಂಟೆಗೆ ಪಾಲಿಕೆಯ ಸಭಾಭವನದಲ್ಲಿ ಚುನಾವಣೆ ನಡೆಯಲಿದೆ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಎಸ್. ಬಿ. ಶೆಟ್ಟೆಣ್ಣವರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂನ್ 30ರ ಬೆಳಗ್ಗೆ 9 ಗಂಟೆಯಿಂದ 11 ಗಂಟೆಯವರೆಗೆ ಮಹಾಪೌರ ಹಾಗೂ ಉಪಮಹಾಪೌರರ ಸ್ಥಾನಗಳಿಗೆ ನಾಮಪತ್ರಗಳ ಸಲ್ಲಿಸುವುದು, ನಂತರ ನಾಮಪತ್ರಗಳ ಪರಿಶೀಲನೆ, ಕ್ರಮಬದ್ಧ ನಾಮಪತ್ರಗಳ ಘೋಷಣೆ, ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವುದು, ಉಮೇದುವಾರರ ಪಟ್ಟಿ ಘೋಷಣೆ, ಅವಿರೋಧ ಆಯ್ಕೆಯಾದಲ್ಲಿ ಫಲಿತಾಂಶ ಘೋಷಣೆ, ಅಭ್ಯರ್ಥಿಗಳು ಒಬ್ಬರಿಗಿಂತ ಹೆಚ್ಚಿಗೆ ಇದ್ದಲ್ಲಿ ಕೈ ಎತ್ತುವ ಮೂಲಕ ಮತದಾನ, ಮತಗಳ ಎಣಿಕೆ ಹಾಗೂ ಫಲಿತಾಂಶ ಘೋಷಣೆ ಪ್ರಕ್ರಿಯೆಗಳು ಜರುಗಲಿವೆ ಎಂದು ಹೇಳಿದರು.
ಯಾರಾಗಲಿದ್ದಾರೆ ಮೇಯರ್, ಉಪಮೇಯರ್: ಹು-ಧಾ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅಧಿಸೂಚನೆ ಪ್ರಕಾರ ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪಮೇಯರ್ ಸ್ಥಾನ ಹಿಂದುಳಿದ ವರ್ಗ ಬ ಗೆ ಮೀಸಲಿದೆ. ಹೀಗಾಗಿ ಮತ್ತೊಮ್ಮೆ ಮಹಿಳಾ ಸಾರಥ್ಯ ಸಿಗಲಿದೆ.
82 ಸದಸ್ಯ ಬಲವಿರುವ ಪಾಲಿಕೆಯಲ್ಲಿ 39 ಬಿಜೆಪಿ, 33 ಕಾಂಗ್ರೆಸ್, 3 ಎಐಎಂಐಎಂ, 6 ಪಕ್ಷೇತರರು ಹಾಗೂ ಓರ್ವ ಜೆಡಿಎಸ್ ಸದಸ್ಯರಿದ್ದಾರೆ. ಪಕ್ಷೇತರರಲ್ಲಿ ಮೂವರು ಬಿಜೆಪಿ ಸೇರಿದ್ದಾರೆ. ಬಹುತೇಕ ಬಿಜೆಪಿ ಪಾಲಿಕೆ ಚುಕ್ಕಾಣಿ ಹಿಡಿಯುವ ಸಾದ್ಯತೆಯಿದೆ.
ಹೆಚ್ಚಿದ ಆಕಾಂಕ್ಷಿಗಳು: ಈ ಬಾರಿ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು ಇರುವುದರಿಂದ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಿದೆ. ಪಾಲಿಕೆಯಲ್ಲಿ 15 ಜನ ಬಿಜೆಪಿ ಮಹಿಳಾ ಸದಸ್ಯರಿದ್ದಾರೆ. ಇವರಲ್ಲಿ ಪ್ರೀತಿ ಖೋಡೆ, ಪೂಜಾ ಶೆಜವಾಡಕರ್, ರಾಧಾಬಾಯಿ ಸಫಾರಿ, ಮೀನಾಕ್ಷಿ ವಂಟಮೂರಿ ಸೇರಿದಂತೆ ಹಲವರು ಮೇಯರ್ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.
ಉಪಮೇಯರ್ ಸ್ಥಾನಕ್ಕೆ ಸಂತೋಷ ಚವ್ಹಾಣ್ ಹಾಗೂ ಶಂಕರ್ ಶೆಳಕೆ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಆದರೆ ಮೇಯರ್, ಉಪ ಮೇಯರ್ ಯಾರಾಗಲಿದ್ದಾರೆ ಎಂಬುದಕ್ಕೆ ಜೂನ್ 30 ರಂದು ಸ್ಪಷ್ಟ ಉತ್ತರ ಸಿಗಲಿದೆ.
Laxmi News 24×7