ಮೈಸೂರು (ಡಿ.18): ನನಗೆ ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರ ಹಾಗೂ ಹೆಚ್ಚು ವೇದನೆ ನೀಡಿದ ಕ್ಷೇತ್ರ ಚಾಮುಂಡೇಶ್ವರಿ. ಚಾಮುಂಡೇಶ್ವರಿ ಕ್ಷೇತ್ರದ ಸೋಲನ್ನು ಸಹಿಸಲು ಅಸಾಧ್ಯ. ನಾನು ಚಾಮುಂಡೇಶ್ವರಿಯಲ್ಲಿ ಇಷ್ಟು ಕೆಟ್ಟದಾಗಿ ಸೋಲುತ್ತೇನೆ ಎಂದು ಕೊಂಡಿರಲಿಲ್ಲ. ನಾನು ಬಾದಾಮಿಯಲ್ಲಿ ಗೆಲ್ಲದಿದ್ದರೆ ನನ್ನ ರಾಜಕೀಯ ಭವಿಷ್ಯವೇ ಮಂಕಾಗಿ ಹೋಗುತ್ತಿತ್ತು. ನೀವು ಸೋಲಿಸಿದಂತೆ ಅವರು ನನ್ನನ್ನು ಸೋಲಿಸಿದ್ದರೆ, ಈ ರಾಜ್ಯದ ಭವಿಷ್ಯ ಏನಾಗುತ್ತಿತ್ತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಭಾವಾನಾತ್ಮಕವಾಗಿ ಮಾತನಾಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ಬಳಿಕ ಇದೇ ಮೊದಲಬಾರಿ ಕ್ಷೇತ್ರಕ್ಕೆ ಆಗಮಿಸಿದ ಅವರು, ಇಲ್ಲಿನ ಜನರು ತಮ್ಮನ್ನು ಸೋಲಿಸಲು ಕಾರಣ ಏನು ಎಂದು ಇದೇ ವೇಳೆ ಪ್ರಶ್ನಿಸಿದ್ದಾರೆ. ಗ್ರಾಮ ಪಂಚಾಯತಿ ಚುನಾವಣೆ ಹಿನ್ನಲೆ ಮೂರು ವರ್ಷಗಳ ಬಳಿಕ ಆಗಮಿಸಿದ ಅವರು, ಗ್ರಾಮ ಜನಾಧಿಕಾರ ಸಭೆಯಲ್ಲಿ ಮಾತನಾಡಿದರು. ಇದೇ ವೇಳೆ ಕ್ಷೇತ್ರದಲ್ಲಿ ತಮ್ಮ ಸೋಲಿನ ಕುರಿತು ಆವಲೋಕನ ನಡೆಸಿದ ಅವರು, ನನ್ನ ಸೋಲಿಗೆ ಕಾರಣವನ್ನು ಪಟ್ಟಿ ಮಾಡಿ ತಿಳಿಸುವಂತೆ ಕೇಳಿದರು
