ಧಾರವಾಡ: ಕೊರೊನಾ ವೈರಸ್ ಮತ್ತೆ ಉಲ್ಬಣಗೊಳ್ಳುತ್ತಿರುವ ಬೆನ್ನಲ್ಲೇ ಹುಬ್ಬಳ್ಳಿ ಭೈರಿದೇವರಕೊಪ್ಪದ 11 ತಿಂಗಳ ಮಗುವಿನಲ್ಲಿ ಕೋವಿಡ್ ಪತ್ತೆ ದೃಢಪಟ್ಟಿದೆ.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿಗೆ ಹೃದಯ ಕಾಯಿಲೆ ಇದ್ದು, ಚಿಕಿತ್ಸೆ ಮುಂದುವರೆದಿದೆ. ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಯಲ್ಲಿ ತಿಳಿಸಿದೆ.
ಮುನ್ನೆಚ್ಚರಿಕೆ ಅಗತ್ಯ: ಸಾಧ್ಯವಾದಷ್ಟು ಜನಸಂದಣಿಯಿಂದ ದೂರ ಇರುವಂತೆ, ಮನೆಯಿಂದ ಹೊರಹೋಗುವಾಗ ಮಾಸ್ಕ್ ಧರಿಸುವಂತೆ ಮತ್ತು ಸಾಮಾಜಿಕ ಅಂತರ ಕಾಪಾಡುವಂತೆ ಹಾಗೂ ಗರ್ಭಿಣಿಯರು, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ, ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.
ಇತ್ತೀಚಿಗೆ ಸಭೆ ನಡೆಸಿದ್ದ ವೈದ್ಯಕೀಯ ಶಿಕ್ಷಣ ಸಚಿವರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವೈದ್ಯರು, ಆರೋಗ್ಯ ಸಿಬ್ಬಂದಿಗೆ ಮಾಸ್ಕ್ ಧರಿಸಲು ಸೂಚಿಸಲಾಗಿದೆ. ಜನರು ಯಾವುದೇ ರೀತಿಯಲ್ಲೂ ಆತಂಕಪಡುವ ಅಗತ್ಯವಿಲ್ಲ, ನಮ್ಮ ಸರ್ಕಾರ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಇತ್ತೀಚಿಗೆ ತಿಳಿಸಿದ್ದರು.
ವಿಕಾಸಸೌಧದಲ್ಲಿ ಮೇ 27 ರಂದು ಕರೆದಿದ್ದ ಕೋವಿಡ್ ಮುನ್ನೆಚ್ಚರಿಕಾ ಸಭೆ ಬಳಿಕ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ್ದ ಸಚಿವರು, ಕೋವಿಡ್ ಪ್ರಕರಣಗಳು ದಿನದಿಂದಕ್ಕೆ ಹೆಚ್ಚಾಗುತ್ತಿವೆ. ಆದರೆ ಇದರ ಬಗ್ಗೆ ಹೆಚ್ಚು ಆತಂಕಪಡುವ ಅಗತ್ಯವಿಲ್ಲ. ಗರ್ಭಿಣಿಯರು, ಮಕ್ಕಳು ಮಾಸ್ಕ್ ಬಳಕೆ ಮಾಡಬೇಕು. ಸರ್ಕಾರ ಎಲ್ಲಾ ರೀತಿಯ ಕ್ರಮ ತೆಗೆದುಕೊಂಡಿದೆ. ಜನರು ಕೂಡ ನಮ್ಮೊಂದಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದ್ದರು.