ಬೆಳಗಾವಿ: ಮುಂಗಾರು ಮಳೆಗೆ ಕುಂದಾನಗರಿಯ ಮುಖ್ಯ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಪ್ರತಿ ವರ್ಷವೂ ನಮಗೆ ಈ ಗೋಳು ತಪ್ಪಿದ್ದಲ್ಲ. ನಮ್ಮ ಪ್ರಾಬ್ಲಂ ಕೇಳುವವರೇ ಇಲ್ಲ ಎಂದು ಆಡಳಿತಕ್ಕೆ ಜನ ಹಿಡಿಶಾಪ ಹಾಕುತ್ತಿದ್ದಾರೆ.
ಬೆಳಗಾವಿ ನಗರ ಪ್ರವೇಶಿಸುವ ರಾಷ್ಟ್ರೀಯ ಹೆದ್ದಾರಿ ಪಕ್ಕದ ಗಾಂಧಿ ನಗರ ಸೇತುವೆ ಬಳಿಯ ಸರ್ವೀಸ್ ರಸ್ತೆಯಲ್ಲಿ ಗುಂಡಿಗಳ ಸಾಮ್ರಾಜ್ಯ ಸೃಷ್ಟಿಯಾಗಿದೆ. ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿದ್ದಾರೆ. ಜನರು ಇಷ್ಟೆಲ್ಲಾ ಸಮಸ್ಯೆ ಎದುರಿಸುತ್ತಿದ್ದರೂ ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, ಹುಬ್ಬಳ್ಳಿ- ಧಾರವಾಡ, ಬಾಗಲಕೋಟೆ ಸೇರಿ ಮುಂತಾದ ಕಡೆಗಳಿಂದ ಆಗಮಿಸುವ ವಾಹನಗಳು ಬೆಳಗಾವಿ ನಗರ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತೆರಳುವುದು ಕೂಡ ಇದೇ ರಸ್ತೆ ಮೂಲಕ. ಇಷ್ಟಿದ್ದರೂ ಕೂಡ ಈ ರಸ್ತೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ವಾಹನ ಸವಾರರು ದೂರುತ್ತಿದ್ದಾರೆ.
ಈಗಾಗಲೇ ಮುಂಗಾರು ಮಳೆ ಶುರುವಾಗಲಿದೆ. ಅದಕ್ಕೂ ಮೊದಲು ಕಳೆದ ಒಂದು ವಾರದಿಂದ ಸುರಿಯುತ್ತಿರುವ ಪೂರ್ವ ಮುಂಗಾರು ಮಳೆಯು ಹಲವು ಅವಾಂತರ ಸೃಷ್ಟಿಸಿದೆ. ಗಾಂಧಿ ನಗರ ಬಳಿಯ ಸರ್ವೀಸ್ ರಸ್ತೆಯಲ್ಲಿ ಪ್ರತಿ ವರ್ಷವೂ ಗುಂಡಿಗಳು ಬೀಳುತ್ತವೆ. ಆದರೂ ಲೋಕೋಪಯೋಗಿ, ಮಹಾನಗರ ಪಾಲಿಕೆ ಸೇರಿ ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಾರೆ. ಒಂದು ತಿಂಗಳು ಮೊದಲೇ ರಸ್ತೆ ದುರಸ್ತಿ ಪಡಿಸಿದ್ದರೆ ನಮಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.