ಬೆಂಗಳೂರು : ಬಾಕಿ ಇರುವ ಕ್ರಿಮಿನಲ್ ಪ್ರಕರಣ ಮುಕ್ತಾಯಗೊಳಿಸಲು 2017ರಲ್ಲಿ 10 ಸಾವಿರ ರು.ಗಳ ಲಂಚ ಸ್ವೀಕರಿಸಿರುವ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದ ಬಾಗಲಗುಂಟೆ ಪೊಲೀಸ್ ಠಾಣೆಯ ಮುಖ್ಯಪೇದೆ ಎಂ.ಕೆ.ಮಂಜಣ್ಣ ಎಂಬುವರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿದು ಆದೇಶಿಸಿದೆ.
ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ಲಂಚ ಪಡೆದಿದ್ದು ರುಜುವಾತಾದ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಒಟ್ಟು 7 ವರ್ಷ ಶಿಕ್ಷೆ ಮತ್ತು 1 ಲಕ್ಷ ರು.ಗಳ ದಂಡದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಮಂಜಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ನೀಡಿದೆ.
ಪ್ರಕರಣದಲ್ಲಿ ಲಂಚಕ್ಕೆ ಬೇಡಿಕೆಯೊಡ್ಡಿರುವುದು ಮತ್ತು ಸ್ವೀಕರಿಸಿರುವುದಕ್ಕೆ ಸಾಕ್ಷ್ಯಗಳಿವೆ. ಎಫ್ಎಸ್ಎಲ್ ವರದಿ ಮತ್ತು ಧ್ವನಿ ಮಾದರಿ ಎರಡೂ ಆರೋಪಿ ಮಂಜಣ್ಣ ವಿರುದ್ಧವಾಗಿಯೇ ಇವೆ. ಹಣ ರಿಕವರಿ ವಿಧಾನದಲ್ಲಿ ಸಣ್ಣ ದೋಷಗಳಾಗಿವೆ. ಹಾಗೆಂದ ಮಾತ್ರಕ್ಕೆ ಆರೋಪಿ ವಿರುದ್ಧ ಸಂದೇಹದ ಪ್ರಯೋಜನ (ಬೆನಿಫಿಟ್ ಆಫ್ ಡೌಟ್) ಅಡಿ ಅವರ ಪರ ತೀರ್ಪು ನೀಡಲಾಗದು ಎಂದು ಹೇಳಿ ತಿಳಿಸಿದ ನ್ಯಾಯಪೀಠ ಮೇಲ್ಮನವಿ ವಜಾಗೊಳಿಸಿ ಆದೇಶಿಸಿದೆ.