ಬೆಂಗಳೂರು: ದೊಡ್ಡಬಳ್ಳಾಪುರ-ಬೆಂಗಳೂರು ಮಾರ್ಗದಲ್ಲಿ ಕಾವೇರಿ ಭವನಕ್ಕೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಮೇಲೆ ಮರದ ಬೃಹತ್ ಕೊಂಬೆ ಮುರಿದು ಬಿದ್ದಿದೆ. ತಕ್ಷಣವೇ ಚಾಲಕ ಬಸ್ ಅನ್ನು ಬಲಕ್ಕೆ ಚಲಾಯಿಸುವ ಮೂಲಕ ಪ್ರಾಣಹಾನಿ ತಪ್ಪಿಸಿದ್ದಾರೆ.
ಪ್ಯಾಲೆಸ್ ಗುಟ್ಟಹಳ್ಳಿಯ ಅರಮನೆ ಮೈದಾನದ ಮುಂಭಾಗ ಗೇಟ್ ನಂಬರ್ 7ರಲ್ಲಿ ಇಂದು ಮಧ್ಯಾಹ್ನ ಘಟನೆ ನಡೆಯಿತು. ನಿಧಾನಗತಿಯಲ್ಲಿ ಬಸ್ ಚಲಿಸುತ್ತಿತ್ತು. ಈ ವೇಳೆ ರಸ್ತೆ ಬದಿಯ ಮರದ ಕೊಂಬೆ ಬಸ್ ಮೇಲೆ ಬಿದ್ದಿದೆ. ಕೊಂಬೆ ಬೀಳುತ್ತಿರುವುದನ್ನು ಗಮನಿಸಿದ ಚಾಲಕ ನಾಗರಾಜು, ರಸ್ತೆಯ ಬಲಕ್ಕೆ ಬಸ್ ತಿರುಗಿಸಿದ್ದಾರೆ. ಹೀಗಾಗಿ ಕೊಂಬೆ ಬಸ್ನ ಕನ್ನಡಿ ಮೇಲೆ ಬಿದ್ದಿದೆ.
“ಒಂದು ವೇಳೆ ಮರದ ಕೊಂಬೆ ಬಸ್ ಮೇಲೆ ಬಿದ್ದಿದ್ದರೆ ಪ್ರಾಣ ಹಾನಿ ಸಂಭವಿಸುವ ಸಾಧ್ಯತೆ ಇತ್ತು” ಎಂದು ಚಾಲಕ ನಾಗರಾಜ್ ತಿಳಿಸಿದರು.
ಬಸ್ನಲ್ಲಿ 67 ಪ್ರಯಾಣಿಕರಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ. ಅವರಿಗೆ ಬೇರೆ ಬಸ್ ವ್ಯವಸ್ಥೆ ಮಾಡಿ ಕಳುಹಿಸಲಾಗಿದೆ.
ಈ ಘಟನೆಯಿಂದ ಬೆಂಗಳೂರು-ಬಳ್ಳಾರಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಿಬಿಎಂಪಿ ಸಿಬ್ಬಂದಿ ಸ್ಥಳಕ್ಕೆ ಬಂದು ಮರದ ಕೊಂಬೆಗಳನ್ನು ತೆರವುಗೊಳಿಸಿದ್ದಾರೆ. ಟ್ರಾಫಿಕ್ ಪೊಲೀಸರು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
Laxmi News 24×7