ಬೆಂಗಳೂರು: ಭಾರತೀಯ ಹವಾಮಾನ ಇಲಾಖೆ ಮೇ 15 ರಿಂದ ಮೇ 18 ರವರೆಗೆ ಗುಡುಗು, ಮಿಂಚು ಮತ್ತು ಬಿರುಗಾಳಿ ಬೀಸುವ ಮುನ್ಸೂಚನೆ ನೀಡಿದೆ. ಕರ್ನಾಟಕದ ಹಲವಾರು ಜಿಲ್ಲೆಗಳಿಗೆ ಕಿತ್ತಳೆ(Orange) ಎಚ್ಚರಿಕೆಯನ್ನೂ ರವಾನಿಸಿದೆ. ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಯೆಲ್ಲೋ(Yellow) ಎಚ್ಚರಿಕೆ ನೀಡಲಾಗಿದೆ.
ಇಂದು ಬೆಂಗಳೂರಿನ ಕೆಲವು ಭಾಗಗಳಲ್ಲಿ ಭಾರಿ ಬಿರುಸಿನ ಮತ್ತು ಆಲಿಕಲ್ಲು ಮಳೆಯಾಗಿದೆ. ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು, ಪ್ರಮುಖ ಮಾರ್ಗಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಪ್ರಯಾಣಿಕರು ಮೊಣಕಾಲು ಮಟ್ಟದ ನೀರಿನಲ್ಲಿ ಸಂಚರಿಸಲು ಪರದಾಡಬೇಕಾಯಿತು. ವಿಶೇಷವಾಗಿ ಪೂರ್ವ ಬೆಂಗಳೂರಿನ ಪ್ರದೇಶಗಳಾದ ವೈಟ್‌ಫೀಲ್ಡ್, ಮಾರತಹಳ್ಳಿ, ಬಾಣಸವಾಡಿ ಮತ್ತು ಹೆಬ್ಬಾಳದಲ್ಲಿ ಬುಧವಾರವೂ ಭಾರೀ ಮಳೆಯಾಗಿದ್ದು, ಸಂಚಾರ ದಟ್ಟಣೆಯಿಂದಾಗಿ ಪ್ರಯಾಣಿಕರಿಗೆ ಅನಾನುಕೂಲತೆ ಉಂಟಾಗಿದೆ.
ಮಾನ್ಯತಾ ಟೆಕ್ ಪಾರ್ಕ್ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾಗಿದೆ. ಇದು ಪದೇ ಪದೇ ಪ್ರವಾಹಕ್ಕೆ ಒಳಗಾಗುವ ಪ್ರದೇಶ ಎಂಬ ಅಪಖ್ಯಾತಿಗೂ ಗುರಿಯಾಗಿದೆ . ಕಚೇರಿಯಲ್ಲಿದ್ದ ನೌಕರರು ಹಂಚಿಕೊಂಡ ವಿಡಿಯೋಗಳಲ್ಲಿ, ರಸ್ತೆಗಳು ಮುಳುಗಿ ಸಂಚಾರ ಸ್ಥಗಿತಗೊಂಡಿರುವುದನ್ನು ತೋರಿಸುತ್ತಿವೆ .
ಸಾಮಾಜಿಕ ಮಾಧ್ಯಮದ ಪೋಸ್ಟ್ ವೊಂದು ಹೀಗಿದೆ: ‘‘ಮತ್ತೊಂದು ವರ್ಷ, ಅದೇ ಸಮಸ್ಯೆ, ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಭಾರಿ ಮಳೆ = ಪ್ರವಾಹ. ರಸ್ತೆಗಳು ಜಲಾವೃತವಾಗಿವೆ, ಪ್ರಯಾಣ ಹಾಳಾಗಿವೆ ಮತ್ತು ಉತ್ಪಾದಕತೆಯ ಮೇಲೆ ಪರಿಣಾಮ ಬೀರುತ್ತದೆ” ಎಂದು ಬಳಕೆದಾರರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಮತ್ತೊಬ್ಬ ಜಾಲತಾಣಿಗ , “ಮಾನ್ಯತಾ ಟೆಕ್ ಪಾರ್ಕ್ ಒಳ್ಳೆಯ ದಿನಗಳಲ್ಲಿ ಬಿಸಿಲಿನಿಂದ ಕೂಡಿರುತ್ತದೆ ಮತ್ತು ಮಳೆಗಾಲದ ದಿನಗಳಲ್ಲಿ ವಾಟರ್ ಪಾರ್ಕ್ ಆಗಿ ಬದಲಾಗುತ್ತದೆ. ಕಳಪೆ ಯೋಜನೆ ಮತ್ತು ರಿಯಲ್ ಎಸ್ಟೇಟ್ ಸಮಸ್ಯೆಗಳಿಂದಾಗಿ” ಇದೆಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಗುರುವಾರ ಬೆಳಗ್ಗೆ 6:00 ಗಂಟೆಯ ಹೊತ್ತಿಗೆ 105 ಮಿಮೀ ಮಳೆಯಾಗಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾಗಿದೆ ಎಂದು ವರದಿಯಾಗಿದೆ.