ಬೆಳಗಾವಿ: ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟವಾಗಿದೆ. ಬೆಳಗಾವಿಯ ವಿದ್ಯಾರ್ಥಿನಿ ರೂಪಾ ಚನಗೌಡ ಪಾಟೀಲ್ 625ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ರೂಪಾ ಪಾಟೀಲ್ ಬೈಲಹೊಂಗಲ ತಾಲ್ಲೂಕಿನ ದೇವಲಾಪುರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ. ಫಲಿತಾಂಶ ಪ್ರಕಟವಾದಾಗ ತಮ್ಮ ಅಜ್ಜಿಯ ಊರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಕಬನೂರ ಗ್ರಾಮದಲ್ಲಿದ್ದರು. ಅಜ್ಜಿ ಮನೆಯಲ್ಲೇ ಸಂಭ್ರಮಾಚರಣೆ ಮಾಡಿದರು. ಸಿಹಿ ಸವಿದು ಸಂಭ್ರಮಿಸಿದರು.
ರೂಪಾ ತಂದೆ ಚನಗೌಡ ರೈತರಾಗಿದ್ದು, ತಾಯಿ ಲತಾ ಗೃಹಿಣಿ. ತಂದೆ ಐಟಿಐ, ತಾಯಿ ಪಿಯುಸಿ ಓದಿದ್ದಾರೆ. ದಂಪತಿಗೆ ಮೂವರು ಮಕ್ಕಳು. ರೂಪಾ ಅವರ ಅಕ್ಕ ವೈಷ್ಣವಿ ಪಿಯುಸಿ ದ್ವಿತೀಯ ವರ್ಷದ ವಿಜ್ಞಾನ ವಿಭಾಗದಲ್ಲಿ ಶೇ.90 ಅಂಕ ಗಳಿಸಿದ್ದರು. ಸಹೋದರ ಸಮರ್ಥಗೌಡ 6ನೇ ತರಗತಿ ಓದುತ್ತಿದ್ದಾನೆ.
ಶಾಲೆಯ ಅವಧಿ ಬಿಟ್ಟು ಪ್ರತಿನಿತ್ಯ 8 ಗಂಟೆ ಅಭ್ಯಾಸ ಮಾಡುತ್ತಿದ್ದೆ. ದಿನಕ್ಕೆ 5-6 ತಾಸು ಓದುತ್ತಿದ್ದೆ. ಶಿಕ್ಷಕರ ಪ್ರೋತ್ಸಾಹ ಸಾಕಷ್ಟಿತ್ತು. ಅಪ್ಪ-ಅವ್ವ ನನಗೆ ಓದಲು ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರು. ಕಂಠಪಾಠಕ್ಕಿಂತ ಅರ್ಥ ಮಾಡಿಕೊಂಡು ಓದಿದರೆ ನೆನಪಿನಲ್ಲಿ ಇಟ್ಟುಕೊಳ್ಳುವುದು ಸುಲಭವಾಗುತ್ತದೆ. ಮುಂದೆ ವೈದ್ಯೆಯಾಗುವ ಗುರಿ ಇಟ್ಟುಕೊಂಡಿದ್ದೇನೆ. ಅಪ್ಪ-ಅವ್ವ ಸೇರಿ ಅಜ್ಜಿ ಮನೆಯವರಿಗೆಲ್ಲ ತುಂಬಾ ಖುಷಿಯಾಗಿದೆ” ಎಂದರು.
ಒಟ್ಟು ಫಲಿತಾಂಶದಲ್ಲಿ ಬೆಳಗಾವಿ ಜಿಲ್ಲೆ ಈ ವರ್ಷ 25ನೇ ಸ್ಥಾನ ಗಳಿಸಿದೆ. ಕಳೆದ ವರ್ಷ 29ನೇ ಸ್ಥಾನದಲ್ಲಿತ್ತು.
Laxmi News 24×7