ತುಮಕೂರು : ನಗರದ ಮಹಾಲಕ್ಷ್ಮಿ ಬಡಾವಣೆಯ ವಾಸಿ ಶಿವಣ್ಣ ಟೈರ್ಸ್ ಮಾಲೀಕರಾದ ಕಾರ್ತಿಕ್ ಅವರ ಕಟ್ಟಡ ಕಾರ್ಮಿಕರ ಶೆಡ್ನಲ್ಲಿ 4 ಅಡಿ ಉದ್ದದ ಕೊಳಕುಮಂಡಲ ಹಾವು ಹಾಗೂ ಅದರ 43 ಮರಿಗಳು ಕಾಣಿಸಿಕೊಂಡಿವೆ.
ಈ ವಿಷಯ ತಿಳಿದ ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಯ (ವಾರ್ಕೊ) ಉರಗ ರಕ್ಷಕರಾದ ಚಂದನ್, ಮನು ಅಗ್ನಿವಂಶಿ ಮತ್ತು ಕಾರ್ತಿಕ್ ಸಿಂಗ್ ಅವರು ಸುರಕ್ಷಿತವಾಗಿ ಹಾವಿನ ಮರಿಗಳನ್ನು ರಕ್ಷಿಸಿ, ಸಮೀಪದ ದೇವರಾಯನ ದುರ್ಗಾ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಈ ಹಾವುಗಳು ನವೆಂಬರ್, ಡಿಸೆಂಬರ್ನಲ್ಲಿ ಮಿಲನಗೊಂಡು ಪೂರ್ವ ಮುಂಗಾರು ಸಮಯದಲ್ಲಿ ಸಂತಾನೋತ್ಪತಿ ಮಾಡುತ್ತವೆ. ಕೊಳಕುಮಂಡಲ ಹಾವುಗಳ(Ovoviviparous)ಲ್ಲಿ ತಾಯಿಯ ದೇಹದೊಳಗೆ ಮೊಟ್ಟೆಗಳು ಬೆಳೆದು ಹೊಟ್ಟೆ ಒಳಗಿನಿಂದಲೇ ಜೀವಂತ ಮರಿಗಳು ಹೊರಬರುತ್ತವೆ.
ತುಮಕೂರು ನಗರ ಹಾಗೂ ಹೊರವಲಯಗಳಲ್ಲಿ ಈ ಪ್ರಕ್ರಿಯೆ ಪ್ರಸ್ತುತ ಪ್ರಾರಂಭವಾಗಿದ್ದು, ಸಾರ್ವಜನಿಕರು ಹೆಚ್ಚು ಜಾಗೃತವಾಗಿರಬೇಕು, ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಸಂಜೆ ಹಾಗೂ ಕತ್ತಲು ಸಮಯದಲ್ಲಿ ಟಾರ್ಚ್ ಬಳಸಿ ಹಾಗೂ ಶೂಗಳನ್ನು ಧರಿಸುವ ಮುನ್ನ ಪರೀಕ್ಷಿಸಿಕೊಳ್ಳಿ ಎಂದು ಉರಗ ರಕ್ಷಕ ಮನವಿ ಮಾಡಿಕೊಂಡಿದ್ದಾರೆ.