ಬೆಳಗಾವಿ: ಎಪ್ರೀಲ್ 30ರಂದು ನಾಡಿನಾಧ್ಯಂತ ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ಜಯಂತಿ ಆಚರಣೆಗೆ ಸಕಲ ಸಿದ್ಧತೆ ನಡೆದಿದೆ. ಬೆಳಗಾವಿಯಲ್ಲಿ ಇದೇ ಮೊದಲ ಬಾರಿ ಎಲ್ಲ ಬಸವಪರ ಸಂಘಟನೆಗಳು ಒಟ್ಟಾಗಿ ಜಯಂತಿ ಆಚರಿಸಲು ನಿರ್ಧರಿಸಿವೆ. ಏ.27ರಂದು ವಿಶ್ವಶಾಂತಿ, ಲೋಕಕಲ್ಯಾಣದ ಸಂಕಲ್ಪ ತೊಟ್ಟು ಬೈಕ್ ರ್ಯಾಲಿ, ಮೇ 4ರಂದು ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ, ಮಹಾನಗರದಲ್ಲಿರುವ ಸುಮಾರು 15 ಬಸವಪರ ಸಂಘಟನೆಗಳು ಬಸವ ಜಯಂತಿ ಉತ್ಸವ ಸಮಿತಿಯಡಿ ಸೇರಿ ಜಯಂತಿ ಆಚರಿಸುತ್ತಿದ್ದೇವೆ. ಏ.27ರಂದು ನಗರದ ಬಸವೇಶ್ವರ ವೃತ್ತದಲ್ಲಿ ಎಲ್ಲ ಸಂಘ ಸಂಸ್ಥೆಗಳ ಸದಸ್ಯರು, ಮುಖಂಡರು, ಜನಪ್ರತಿನಿಧಿಗಳು ಹಾಗೂ ಮಠಾಧೀಶರ ಉಪಸ್ಥಿತಿಯಲ್ಲಿ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಹಾಗೂ ಷಟಸ್ಥಳ ಧ್ವಜಾರೋಹಣ ನೆರವೇರಿಸುವ ಮೂಲಕ ಬಸವ ಜಯಂತಿ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು ಎಂದರು.
ಬಳಿಕ ಬೈಕ್ ರ್‍ಯಾಲಿಗೆ ಚಾಲನೆ ನೀಡಲಾಗುತ್ತದೆ. ಈ ರ್‍ಯಾಲಿಯು ಬಸವೇಶ್ವರ ವೃತ್ತದಿಂದ ಪ್ರಾರಂಭವಾಗಿ, ಖಾಸಬಾಗ್, ಶಾಹಪುರ, ವಡಗಾಂವ ಮಾರ್ಗವಾಗಿ ಶಿವಬಸವ ನಗರ, ಮಹಾಂತೇಶ ನಗರ, ಆಂಜನೇಯ ನಗರ, ಶ್ರೀನಗರ ಮೂಲಕ ಸಂಚರಿಸಿ ರಾಮತೀರ್ಥ ನಗರದಲ್ಲಿ ಮುಕ್ತಾಯವಾಗಲಿದೆ ಎಂದರು.ಲಿಂಗಾಯತ ಸಂಘಟನೆ ಜಿಲ್ಲಾಧ್ಯಕ್ಷ ಈರಣ್ಣ ದೇಯಣ್ಣವರ ಮಾತನಾಡಿ, ಈ ಬಾರಿ ಎ.29 ಮತ್ತು 30ರಂದು ಕೂಡಲಸಂಗಮದಲ್ಲಿ ಕರ್ನಾಟಕ ಸರ್ಕಾರ ಬಸವಣ್ಣನವರ ರಾಷ್ಟ್ರಮಟ್ಟದ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಜಿಲ್ಲೆಯಿಂದ ಬಹಳಷ್ಟು ಬಸವಾಭಿಮಾನಿಗಳು ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ಆದ್ದರಿಂದ ಬೆಳಗಾವಿಯಲ್ಲಿ ಮೇ. 4ರಂದು ಸಾಯಂಕಾಲ 4 ಗಂಟೆಗೆ ಬಸವಣ್ಣನವರ ಪ್ರತಿಮೆಯೊಂದಿಗೆ ನಗರದಲ್ಲಿ ಬೃಹತ್ ಮೆರವಣಿಗೆ ಹಮ್ಮಿಕೊಂಡಿದ್ದೇವೆ. ಮೆರವಣಿಗೆಯೂ ನಗರದ ರಾಣಿ ಚನ್ನಮ್ಮ ವೃತ್ತದಿಂದ ಪ್ರಾರಂಭವಾಗಿ ಕಾಕತಿವೇಸ್ ರಸ್ತೆ, ಗಣಪತಿ ಗಲ್ಲಿ, ಮಾರುತಿ ಗಲ್ಲಿ, ರಾಮದೇವ್ ಗಲ್ಲಿ, ಸಮಾದೇವಿ ಗಲ್ಲಿ ಮೂಲಕ ಆಗಮಿಸಿ ಕೆಎಲ್ಇ ಸಂಸ್ಥೆಯ ಲಿಂಗರಾಜ್ ಕಾಲೇಜಿನಲ್ಲಿ ಮುಕ್ತಾಯವಾಗಲಿದೆ ಎಂದರು.