ಬೆಳಗಾವಿ: ಮಳೆ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಲ್ಯಾಂಡ್ ಆಗಬೇಕಿದ್ದ ಸ್ಟಾರ್ ಏರ್ಲೈನ್ಸ್ನ ವಿಮಾನವೊಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಇಳಿದಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು.
ಶಿವಮೊಗ್ಗದಲ್ಲಿ ವಿಪರೀತ ಮಳೆ ಹಿನ್ನೆಲೆಯಲ್ಲಿ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಿರುಪತಿಯಿಂದ ಶಿವಮೊಗ್ಗಕ್ಕೆ ಹೋಗಬೇಕಿದ್ದ ಸ್ಟಾರ್ ಏರ್ಲೈನ್ಸ್ ವಿಮಾನ ಭಾನುವಾರ ರಾತ್ರಿ 8.30ಕ್ಕೆ ಬೆಳಗಾವಿಗೇ ತನ್ನ ಪ್ರಯಾಣ ನಿಲ್ಲಿಸಿತು.
ಸ್ಟಾರ್ ಏರ್ ಲೈನ್ಸ್ ಕಡೆಯಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.ಈ ವಿಮಾನದಲ್ಲಿ 60 ಪ್ರಯಾಣಿಕರು ಇದ್ದರು. ಅವರಿಗೆಲ್ಲ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಯತ್ನಿಸಲಾಯಿತು.
ಆದರೆ ಸಾಧ್ಯವಾಗಲಿಲ್ಲ. ಪ್ರಯಾಣಿಕರು ಕೆಲ ಗಂಟೆ ವಿಮಾನ ನಿಲ್ದಾಣದಲ್ಲೇ ಪರದಾಡುವಂತಾಯಿತು. ಕೊನೆಗೆ ಹಲವರು ಬೆಳಗಾವಿಯ ಲಾಡ್ಜ್ಗಳ ಮೊರೆ ಹೋದರು.