ದೇವನಹಳ್ಳಿ, ಏಪ್ರಿಲ್ 09: ಕರ್ನಾಟಕದಲ್ಲಿ ಈಗಾಗಲೇ ಅಗತ್ಯ ದಿನ ಬಳಕೆಯ ವಸ್ತುಗಳಾದ ಹಾಲು, ಗ್ಯಾಸ್, ಪೆಟ್ರೋಲ್, ಡಿಸೇಲ್ ಸೇರಿದಂತೆ ವಿವಿಧ ಸರಕು ಮತ್ತು ಸೇವೆಗಳ ದರ ಏರಿಕೆ (price hike) ಮಾಡಲಾಗಿದೆ. ಈ ಬೆಲೆ ಏರಿಕೆಯಿಂದ ಕಂಗಲಾಗಿರುವ ಜನರಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ತಮ್ಮ ಮಕ್ಕಳನ್ನ ಖಾಸಗಿ ಶಾಲೆಗೆ (Private schools) ಸೇರಿಸಿರುವ ಪೋಷಕರಿಗೆ ಏಕಾಏಕಿ ಸಾವಿರಾರು ರೂ ಶುಲ್ಕ ಹೆಚ್ಚಳ ಮಾಡಲಾಗಿದ್ದು, ಕೆಲ ಖಾಸಗಿ ಶಾಲೆಗಳ ವಿರುದ್ದ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.
ಏಕಾಏಕಿ ಫೀಸ್ ಹೆಚ್ಚಳ: ಶಾಲೆಗೆ ಮುತ್ತಿಗೆ ಹಾಕಿದ ಪೋಷಕರು
ಖಾಸಗಿ ಶಾಲೆಯಲ್ಲಿ ಏಕಾಏಕಿ ಶುಲ್ಕ ಹೆಚ್ಚಳದಿಂದ ಆಕ್ರೋಶಗೊಂಡ ಪೋಷಕರು ಬೆಂಗಳೂರು ಉತ್ತರ ತಾಲೂಕಿನ ಹೊಸಹಳ್ಳಿ ಗ್ರಾಮದ ಎಂವಿಎಂ ಶಾಲೆಗೆ ಮುತ್ತಿಗೆ ಹಾಕಿ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿರುವಂತಹ ಘಟನೆ ನಡೆದಿದೆ. ಅಂದಹಾಗೆ ಎಂವಿಎಂ ಶಾಲೆಯಲ್ಲಿ ಸುಮಾರು 850 ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಕಳೆದ ಭಾರಿಗಿಂತ ಈ ಭಾರಿ ಶಾಲೆಯ ಫೀಸ್ ಹೆಚ್ಚಳ ಮಾಡಿದ್ದಾರಂತೆ.