ಹಾವೇರಿ: ಮಂಗಳವಾರ ಸುರಿದ ಭಾರೀ ಮಳೆಗೆ ಹಾವೇರಿ ನಗರ ತತ್ತರಿಸಿದೆ. ಮಳೆಯಿಂದ ಸುಮಾರು 10ಕ್ಕೂ ವಿದ್ಯುತ್ ಕಂಬಗಳು, 10ಕ್ಕೂ ಅಧಿಕ ಮರಗಳು ಧರೆಗುರುಳಿದ್ದು, ವಿದ್ಯುತ್ ಇಲ್ಲದೇ ಕೆಲ ಬಡಾವಣೆಗಳು ಇಡೀ ರಾತ್ರಿ ಕತ್ತಲಲ್ಲೇ ಕಾಲ ಕಳೆಯಬೇಕಾಯಿತು.
ಎರಡು ಕಾರುಗಳ ಮೇಲೆ ಮರ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಕಾರು ಪ್ರಯಾಣಿಕರು ಪಾರಾಗಿದ್ದಾರೆ. ಕೆರಿಮತ್ತಿಹಳ್ಳಿ-ಹಾವೇರಿ ಸಂಪರ್ಕಿಸುವ ರಸ್ತೆಯಲ್ಲಿ ಬೃಹತ್ ಮರವೊಂದು ಬೇರು ಸಮೇತ ಧರೆಗುರುಳಿದ್ದು, ಸಂಚಾರ ಬಂದ್ ಆಗಿದೆ. ಪರಿಣಾಮ ಹಾವೇರಿಯಿಂದ ಕೆರಿಮತ್ತಿಹಳ್ಳಿಗೆ ಹೋಗಲು ಆಲದಕಟ್ಟಿ ಮಾರ್ಗದಲ್ಲಿ ಚಲಿಸಬೇಕಾದ ಅನಿವಾರ್ಯತೆ ಎದುರಾಗಿದೆ.ಮೈಲಾರ ಮಹದೇವ ವೃತ್ತದಲ್ಲೂ ಮರಗಳು ಧರೆಗುರುಳಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಮರದ ಟೊಂಗೆಗಳು ಮಳೆ ಗಾಳಿಗೆ ಜೋತು ಬಿದ್ದಿವೆ. ಶಿವಾಜಿನಗರ ಮತ್ತು ಮೈಲಾರ ಮಹದೇವಪ್ಪ ರಸ್ತೆಗಳಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದರಿಂದ ವಿದ್ಯುತ್ ತಂತಿ ಎಲ್ಲೆಂದರಲ್ಲಿ ಹರಡಿದ್ದು, ಹೆಸ್ಕಾಂ ಸಿಬ್ಬಂದಿ ಹೊಸ ವಿದ್ಯುತ್ ಕಂಬ ಹಾಗೂ ತಂತಿ ಹಾಕುವ ಕಾರ್ಯ ನಡೆಸಿದ್ದಾರೆ. ಮತ್ತೊಂದೆಡೆ ಮರಗಳು ಬಿದ್ದ ಜಾಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ರಸ್ತೆ ತೆರವು ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.ಮರ, ವಿದ್ಯುತ್ ಕಂಬಗಳು ಧರೆಗುರುಳಲು ಅರಣ್ಯ ಇಲಾಖೆ ಮತ್ತು ಹೆಸ್ಕಾಂ ಇಲಾಖೆ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಮಳೆಗಾಲ ಆಗಮನದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮತ್ತು ಹೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಮೌಕಿಕವಾಗಿ ಈ ಮೊದಲೇ ತಿಳಿಸಲಾಗಿತ್ತು. ಆದರೆ, ಅವರು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಇದಕ್ಕಾಗಿ ಈ ರೀತಿಯ ಅವಘಡಗಳಾಗಿವೆ. ಘಟನೆ ನಡೆದ ಮೇಲೆ ತೆಗೆದುಕೊಳ್ಳುವ ಕ್ರಮಗಳಿಗಿಂತ ಘಟನೆ ಆಗುವ ಮುನ್ನ ತೆಗೆದುಕೊಳ್ಳುವ ಕ್ರಮಗಳು ಮುಖ್ಯ. ವಿಷಯ ತಿಳಿಯುತ್ತಿದ್ದಂತೆ ಘಟನೆ ನಡೆದ ಸ್ಥಳಗಳಿಗೆ ಅಧಿಕಾರಿಗಳ ಜೊತೆ ಭೇಟಿ ನೀಡಿದ್ದೇನೆ. ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಲಾಗಿದೆ. ಈಗಾಗಲೇ ನಗರದ ಪ್ರಮುಖ ರಸ್ತೆಗಳ ಸ್ವಚ್ಛಗೊಳಿಸಲಾಗಿದೆ. ಚರಂಡಿ, ರಾಜಕಾಲುವೆ ಸ್ವಚ್ಛತಾಕಾರ್ಯ ನಡೆದಿದೆ. ಇದಲ್ಲದೆ ಗಾಳಿ ಮಳೆಗೆ ಬೀಳುವ ಮರಗಳ ಬಗ್ಗೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅದೇ ರೀತಿ ಗಾಳಿ ಮಳೆಗೆ ಬೀಳಬಹುದಾದ ವಿದ್ಯುತ್ ಕಂಬಗಳ ಬದಲಾವಣಿಗೆ ಸಹ ಸೂಚನೆ ನೀಡಿದ್ದೇನೆ. ಕೊನೆಯ ಪಕ್ಷ ಬರುವ ಮಳೆಗಾಲದಲ್ಲಾದರೂ ನಗರದ ನಿವಾಸಿಗಳು ಯಾವುದೇ ತೊಂದರೆಗೆ ಒಳಗಾಗದೇ ಇರಲಿ ಎಂದರು.