ಹುಬ್ಬಳ್ಳಿ: ಭಾನುವಾರ ಕೊಲೆಯಾದ ಐದು ವರ್ಷದ ಬಾಲಕಿಯ ಮೃತದೇಹದ ಮರಣೋತ್ತರ ಪರೀಕ್ಷೆ ಇಂದು ನಗರದ ಕೆಎಂಸಿಆರ್ಐ ಆಸ್ಪತ್ರೆಯಲ್ಲಿ ನಡೆಯಿತು. ಬಳಿಕ ಮೃತದೇಹವನ್ನು ಮಗುವಿನ ಮನೆಗೆ ತೆಗೆದುಕೊಂಡು ಹೋಗಲಾಯಿತು. ಈ ವೇಳೆ, ಕುಟುಂಬಸ್ಥರ ಆಕ್ರಂದನ ಮನ ಕಲಕುವಂತಿತ್ತು. ಬಳಿಕ ದೇವಾಂಗಪೇಟೆಯ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಪ್ರತಿಕ್ರಿಯಿಸಿ, “ಬಾಲಕಿ ಹಾಗೂ ಆರೋಪಿಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದೆ. ಆರೋಪಿಯ ಹಿನ್ನೆಲೆಯನ್ನು ಪತ್ತೆ ಮಾಡುತ್ತಿದ್ದೇವೆ. ವಿಚಾರಣೆಯ ವೇಳೆ ತಾನು ಬಿಹಾರದ ಪಾಟ್ನಾ ಮೂಲದವ ಅಂತ ಮಾತ್ರ ಹೇಳಿದ್ದಾನೆ. ಹೀಗಾಗಿ ಆತನ ಕುಟುಂಬಸ್ಥರು, ಸ್ನೇಹಿತರು ಈ ಹಿಂದೆ ಕೆಲಸ ಮಾಡಿಸಿಕೊಂಡ ಮಾಲೀಕನ ಮಾಹಿತಿ ಸಂಗ್ರಹಿಸುತ್ತಿದ್ದೇವೆ” ಎಂದು ತಿಳಿಸಿದರು.ಆರೋಪಿಯ ಮೃತದೇಹವನ್ನು ಹಸ್ತಾಂತರಿಸುವ ಕುರಿತು ಕಾನೂನು ತಜ್ಞರೊಂದಿಗೆ ಚರ್ಚೆ ಮಾಡುತ್ತಿದ್ದೇವೆ. ನಮ್ಮ ಪಿಎಸ್ಐ ಅವರ ಆರೋಗ್ಯ ಸುಧಾರಿಸುತ್ತಿದೆ. ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ಥೆ ಮಾಡಿದ್ದೇವೆ. ಆದರೆ ಅವರ ಕುಟುಂಬಸ್ಥರು ಬಯಸಿದರೆ ಅವರ ಮನೆ ಸಮೀಪದ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡುತ್ತೇವೆ” ಅವರು ಮಾಹಿತಿ ನೀಡಿದರು.ಮತ್ತೊಂದೆಡೆ, ನಿನ್ನೆ ಎನ್‌ಕೌಂಟರ್ ನಡೆದ ಸ್ಥಳವನ್ನು ಪೊಲೀಸ್ ಕಮಿಷನರ್ ಪರಿಶೀಲನೆ ನಡೆಸಿದರು. ತಾರಿಹಾಳ ಬಳಿ ಆರೋಪಿ ವಾಸವಾಗಿದ್ದ ಶೆಡ್ ಹಾಗೂ ಆರೋಪಿ ಕಲ್ಲು ಎಸೆದಿರುವುದು ಹಾಗೂ ವಾಹನ ಜಖಂ ಸೇರಿದಂತೆ ಸಿಬ್ಬಂದಿಯ ವಸ್ತುಗಳು ಬಿದ್ದಿರುವ ಗುರುತುಗಳನ್ನು ಪರಿಶೀಲನೆ ನಡೆಸಿದರು.