ಹುಬ್ಬಳ್ಳಿ : ಚಿಕಿತ್ಸೆಗೆ ಎಂದು ದಾಖಲಾಗಿದ್ದ ರೋಗಿಯೊಬ್ಬ ಏಕಾಏಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಕೆಎಂಸಿ ಆರ್ಐ ಆಸ್ಪತ್ರೆಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.
ನಗರದ ನೇಕಾರನಗರದ ನಿವಾಸಿ ಆದರ್ಶ ಗೊಂದಕರ್ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ಯುವಕ. ಜ್ವರದ ಹಿನ್ನೆಲೆ ಕಳೆದ ಎರಡು ದಿನಗಳ ಹಿಂದೆ ಕೆಎಂಸಿಆರ್ಐಗೆ ದಾಖಲಾಗಿ ಯುವಕ ಚಿಕಿತ್ಸೆ ಪಡೆಯುತ್ತಿದ್ದ. ಆದರೆ, ಏಕಾಏಕಿ ಬೆಳಗಿನ ಜಾವ ಕೆಎಂಸಿಆರ್ಐ ಆಸ್ಪತ್ರೆಯ ಮೂರನೇ ಮಹಡಿಯ ಕಿಟಕಿ ಮೂಲಕ ಜಿಗಿದಿದ್ದಾನೆ. ಕೂಡಲೇ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಿದರೂ ಕೂಡ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾನೆ. ಈ ಕುರಿತಂತೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಬಗ್ಗೆ ಕೆಎಂಸಿಆರ್ಐ ನಿರ್ದೇಶಕರು ಪ್ರತಿಕ್ರಿಯಿಸಿದ್ದು ಹೀಗೆ: ಈ ಬಗ್ಗೆ ಕೆಎಂಸಿಆರ್ಐ ನಿರ್ದೇಶಕ ಡಾ. ಎಸ್ ಎಫ್ ಕಮ್ಮಾರ ಈ ಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ಕಳೆದ ಎರಡು ದಿನಗಳಿಂದ ಆದರ್ಶ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಇಂದು ಬೆಳಗಿನ ಜಾವ 3.30 ಸುಮಾರಿಗೆ ಶೌಚಾಲಯಕ್ಕೆ ಹೋಗಿ ಅಲ್ಲಿಂದ ಮೂರನೇ ಮಹಡಿಯಿಂದ ಜಿಗಿದಿದ್ದಾನೆ. ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವ ಆಗಿ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣ ಆತನಿಗೆ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ ಎಂದಿದ್ದಾರೆ.ಯಾವುದೇ ಭದ್ರತಾಲೋಪ ಆಗಿಲ್ಲ – ಮುಂಜಾಗ್ರತಾ ಕ್ರಮಗಳ ಬಗ್ಗೆ ವರದಿಗೆ ಸೂಚನೆ: ಆದರೆ ಕೆಎಂಸಿಆರ್ಐನಿಂದ ಯಾವುದೇ ಭದ್ರತಾ ಲೋಪವಾಗಿಲ್ಲ. ನಮ್ಮ ಸಿಬ್ಬಂದಿ ಕರ್ತವ್ಯದಲ್ಲಿ ಇದ್ದರು. ಶೌಚಾಲಯಕ್ಕೆ ಅಂತ ತೆರಳಿ ಮೇಲಿಂದ ಜಿಗಿದಿದ್ದಾನೆ. ಆದರೂ ಇಂತಹ ಘಟನೆಗಳು ಮರುಕಳಿಸಬಾರದು ಎಂಬ ದೃಷ್ಟಿಯಿಂದ ಡಾ. ರಾಜಶೇಖರ ದ್ಯಾಬೇರಿ ನೇತೃತ್ವದ ಒಂದು ಸಮಿತಿ ರಚನೆ ಮಾಡಲಾಗಿದ್ದು, ಘಟನೆ ಕುರಿತಂತೆ ಹಾಗೂ ಮುಂದೆ ಆಗುವ ಅನಾಹುತ ತಪ್ಪಿಸಲು ಮುಂಜಾಗ್ರತಾ ಕ್ರಮಗಳ ಬಗ್ಗೆ ವರದಿ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.