ಬೆಂಗಳೂರು,ಡಿ.12- ಸಾರಿಗೆ ನೌಕರರ ಬಿಕ್ಕಟ್ಟನ್ನು ಪರಿಹರಿಸಲು ವಿಫಲರಾಗಿರುವ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಕಾರ್ಯ ವೈಖರಿ ವಿರುದ್ದ ಮುಖ್ಯಮಂತ್ರಿ ಯಡಿಯೂರಪ್ಪ ಕೆಂಡ ಕಾರಿದ್ದಾರೆ. ಕಳೆದ ಮೂರು ದಿನಗಳಿಂದ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಬಸ್‍ಗಳ ಸಂಚಾರಕ್ಕೆ ಅವಕಾಶವನ್ನೂ ನೀಡದೇ ಬೀದಿಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಾರಂಭದಲ್ಲೇ ಈ ಬಿಕ್ಕಟ್ಟನ್ನು ಪರಿಹರಿಸಿದ್ದರೆ ಇಂದು ಸಮಸ್ಯೆ ಉದ್ಭವವಾಗುತ್ತಿತ್ತೇ ಎಂದು ಸವದಿ ಅವರನ್ನು ಪ್ರಶ್ನಿಸಿದ್ದಾರೆ.
ನೌಕರರು ಬೀದಿಗೆ ಬರುವ ಮೊದಲು ಅವರ ಬೇಡಿಕೆಗಳೇನೂ ಎಂಬುದನ್ನು ಪರಿಶೀಲಿಸಬೇಕಿತ್ತು. ಸಂಘಟನೆಗಳ ಮುಖಂಡರು ಹಾಗೂ ಅಧಿಕಾರಿಗಳ ಜೊತೆ ಸಂಧಾನ ನಡೆಸಿದ್ದರೆ ಪರಿಸ್ಥಿತಿ ಇಂದು ಈ ಮಟ್ಟಕ್ಕೆ ಬರುತ್ತಿತ್ತೇ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಕೊರೊನಾದಂತಹ ಸಂದರ್ಭದಲ್ಲಿ ಸರ್ಕಾರದ ಬೊಕ್ಕಸಕ್ಕೆ ಆದಾಯ ಇಲ್ಲದಿದ್ದರೂ ನಾವು ಇಲಾಖೆಯ ನೌಕರರ ಬಾಕಿ ವೇತನವನ್ನು ಸಂಪೂರ್ಣವಾಗಿ ನೀಡಿದ್ದೇವೆ. ಅವರ ಬೇಡಿಕೆಗಳನ್ನು ಈಡೇರಿಸಿದ್ದೇವೆ. ಈಗ ಪ್ರತಿಭಟನೆಯಿಂದ ಸರ್ಕಾರಕ್ಕೆ ಕಪ್ಪುಚುಕ್ಕೆಯಾಗಿದೆ. ಸಚಿವರಾಗಿ ನಿಮ್ಮ ಕರ್ತವ್ಯ ಗೊತ್ತಿರಬೇಕೆಲ್ಲವೇ ಎಂದು ಹರಿಹಾಯ್ದಿದ್ದಾರೆ.
ನೌಕರರು ಪ್ರತಿಭಟನೆ ನಡೆಸುತ್ತೇವೆಂದು ಪಟ್ಟು ಹಿಡಿದಾಗಲೇ ವಿವಿಧ ಸಂಘಟನೆಗಳ ಮುಖಂಡರನ್ನು ಕರೆಸಿ ಮಾತುಕತೆ ನಡೆಸಿದ್ದರೆ ಸಮಸ್ಯೆ ಇಷ್ಟು ದೊಡ್ಡಾಗುತ್ತಿರಲಿಲ್ಲ. ನಿಮ್ಮ ವೈಫಲ್ಯದಿಂದಾಗಿ ಸರ್ಕಾರಕ್ಕೆ ಕಳಂಕ ಬಂದಿದೆ. ಎಲ್ಲದಕ್ಕೂ ಹಿರಿಯ ಸಚಿವರನ್ನೇ ಅವಲಂಬಿಸಿದರೆ ನಿಮ್ಮ ಕೆಲಸ ಏನು ಎಂದು ಸವದಿಗೆ ಬಿಸಿ ಮುಟ್ಟಿಸಿದ್ದಾರೆ. ಯಾವಾಗ ಮುಖ್ಯಮಂತ್ರಿಯವರು ದೂರವಾಣಿಯಲ್ಲಿ ಕೆಂಡ ಕಾರಿದರೋ ಇಂದು ಬೆಳಗ್ಗಿನಿಂದಲೇ ಲಕ್ಷ್ಮಣ್ ಸವದಿ ಯಾರ ಕೈಗೂ ಸಿಗದೆ ಅವರ ಭದ್ರತಾ ಸಿಬ್ಬಂದಿಯನ್ನು ಬಿಟ್ಟು ರಹಸ್ಯ ಸ್ಥಳಕ್ಕೆ ತೆರಳಿದ್ದಾರೆ.
ಜಯಮಾಲ್‍ನಲ್ಲಿರುವ ಸರ್ಕಾರಿ ನಿವಾಸ ಹಾಗೂ ಅವರ ಖಾಸಗಿ ಫ್ಲಾಟ್‍ನಲ್ಲೂ ಕೂಡ ಸವದಿ ಇರಲಿಲ್ಲ. ಸರ್ಕಾರಿ ಕಾರು ಹಾಗೂ ಎಸ್ಕಾರ್ಟ್ ಬಿಟ್ಟು ಖಾಸಗಿ ವಾಹನದಲ್ಲಿ ಬೆಳಗ್ಗೆ ಹೋದವರು ಯಾರಿಗೂ ಕೂಡ ಪತ್ತೆಯಾಗಿಲ್ಲ. ನಿನ್ನೆ ಅಧಿಕಾರಿಗಳು ಮತ್ತು ಸಂಘಟನೆಗಳ ಮುಖಂಡರ ಜೊತೆ ಸಚಿವರು ಮಾತುಕತೆ ನಡೆಸಿದ್ದರು. ಆದರೆ ಅದು ಫಲಪ್ರದವಾಗಿರಲಿಲ್ಲ.