ಬೆಂಗಳೂರು, ಮಾರ್ಚ್ 27: ಮೈಸೂರು ಕುಶಾಲನಗರ ಹೆದ್ದಾರಿ ಯೋಜನೆ (Mysuru-Kushalnagar highway) ಸಂಬಂಧ ದೀರ್ಘ ಕಾಲದಿಂದ ಬಾಕಿ ಉಳಿದಿದ್ದ ಪ್ಯಾಕೇಜ್ 3 ರ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಅಂತಿಮವಾಗಿ ಅನುಮೋದನೆ ದೊರೆತಿದೆ. ಮೈಸೂರು ಕುಶಾಲನಗರ ಹೈವೇಗೆ 2023ರ ಮಾರ್ಚ್ನಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಶಂಕುಸ್ಥಾಪನೆ ನೆರವೇರಿಸಿದ್ದರು.
ಇದೀಗ ಮೂರನೇ ಹಂತದ ಪ್ಯಾಕೇಜ್ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿ ಮಾಹಿತಿ ಹಂಚಿಕೊಂಡಿರುವ ಸಂಸದ ಯದುವೀರ್ ಒಡೆಯರ್ (Yaduveer Krishnadatta Chamaraja Wadiyar), ಕೇಂದ್ರ ಸರ್ಕಾರಕ್ಕೆ ಕೃತಜ್ಙತೆ ಸಲ್ಲಿಸಿದ್ದಾರೆ
.ಮೈಸೂರು-ಕುಶಾಲನಗರ ಹೆದ್ದಾರಿ ಯೋಜನೆಯ ದೀರ್ಘಕಾಲದಿಂದ ಬಾಕಿ ಉಳಿದಿದ್ದ ಪ್ಯಾಕೇಜ್ 3 ನಿರ್ಮಾಣಕ್ಕೆ ಅಂತಿಮವಾಗಿ ಅನುಮೋದನೆ ದೊರೆತಿದೆ ಎಂದು ನಿಮ್ಮೊಂದಿಗೆ ಹಂಚಿಕೊಳ್ಳಲು ಹರ್ಷಿಸುತ್ತೇನೆ. ಇದು ನಮ್ಮ ಪ್ರದೇಶಕ್ಕೆ ಒಂದು ಪ್ರಮುಖ ಮೈಲಿಗಲ್ಲು, ವಿಶೇಷವಾಗಿ ಯೋಜನೆಯು ವರ್ಷಗಳಲ್ಲಿ ಎದುರಿಸಿದ ಹಲವು ವಿಳಂಬಗಳ ನಂತರ. ಇದು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಿರವಾದ ಅನುಸರಣೆ ಮತ್ತು ದೃಢನಿಶ್ಚಯದ ಪ್ರಯತ್ನಗಳ ಫಲಿತಾಂಶವಾಗಿದೆ ಎಂದು ಯದುವೀರ್ ಹೇಳಿದ್ದಾರೆ.