ಮಾನವ ಅಧಿಕಾರ ದಿನಾಚರಣೆ ನಿಮಿತ್ತ ಮಾನವ ಅಧಿಕಾರ ಲೋಕ ಕಲ್ಯಾಣ,ಭ್ರಷ್ಟಾಚಾರ ವಿರೋಧಿ ಸಮಿತಿಯಿಂದ ಪಾದಯಾತ್ರೆ
ಮಾನವ ಅಧಿಕಾರ ಲೋಕ ಕಲ್ಯಾಣ ಮತ್ತು ಭ್ರಷ್ಟಾಚಾರ ವಿರೋಧಿ ಸಮಿತಿಯಿಂದ ಮಾನವ ಅಧಿಕಾರ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
: ವಿಶ್ವ ಸಂಸ್ಥೆಯ ಮಾರ್ಗದರ್ಶನದಲ್ಲಿ ಪ್ರತಿವರ್ಷ ಡಿಸೆಂಬರ್ 10ರಂದು ವಿಶ್ವ ಮಾನವ ಅಧಿಕಾರ ದಿನ ಆಚರಿಸಲಾಗುತ್ತದೆ. 1948ರಿಂದ ಆಚರಿಸುತ್ತ ಬರಲಾಗಿರುವ ಈ ದಿನವನ್ನು ಈ ವರ್ಷ ಮಾನವ ಅಧಿಕಾರ ಲೋಕ ಕಲ್ಯಾಣ ಮತ್ತು ಭ್ರಷ್ಟಾಚಾರ ವಿರೋಧಿ ಸಮಿತಿಯಿಂದ ಗುರುವಾರ ಆಚರಿಸಲಾಯಿತು. ಅಂಜುಮನ್ ಫ್ಯಾಮಿಲಿ ಕೋರ್ಟ್‍ನಿಂದ ಚನ್ನಮ್ಮ ಸರ್ಕಲ್‍ವರೆಗೆ ಪಾದಯಾತ್ರೆ ಮೂಲಕ 3 ಪ್ರದಕ್ಷಿಣೆ ಹಾಕಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಮುಖಂಡರು ಮತ್ತು ಕಾರ್ಯಕರ್ತರು, ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಜೀವಿಸಿ ಮತ್ತು ಜೀವಿಸಲು ಬಿಡಿ, ಭ್ರಷ್ಟಾಚಾರ ಹಾಗೂ ಶೋಷಣೆಮುಕ್ತ ಸಮಾಜ ನಿರ್ಮಿಸಲು ಮಾರ್ಗದರ್ಶನ ಮಾಡಿ ಎಂದು ಮನವಿ ಮಾಡಿದರು.
ಈ ವೇಳೆ ಮಾನವ ಅಧಿಕಾರ ಲೋಕ ಕಲ್ಯಾಣ ಮತ್ತು ಭ್ರಷ್ಟಾಚಾರ ವಿರೋಧಿ ಸಮಿತಿ ಜಿಲ್ಲಾ ಅಧ್ಯಕ್ಷ ನಿಯಾಜ್ ಮುಲ್ಲಾ ಮಾತನಾಡಿ, ಸಮಾಜದಲ್ಲಿ ಶೋಷಣೆ, ಭ್ರಷ್ಟಾಚಾರ ದೂರ ಮಾಡಲು, ಪರಿಸರ ಸಂರಕ್ಷಣೆಗೆ ನಮ್ಮ ಸಂಘಟನೆಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಜಾತಿ, ವರ್ಗವೆನ್ನದೇ ಎಲ್ಲರ ಬೆಳವಣಿಗೆಗೂ ಸಮಾನ ಅವಕಾಶ ಸಿಗಬೇಕು ಎಂಬುದು ನಮ್ಮ ನಿಲುವಾಗಿದೆ, ಜಾಗೃತಿ ಮೂಡಿಸುವ ಜೊತೆಗೆ ಸಮಾಜವನ್ನು ಜೊತೆಗೆ ಕರೆದುಕೊಂಡು ಕಾರ್ಯ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದರು.
ಮಾನವ ಅಧಿಕಾರ ಲೋಕ ಕಲ್ಯಾಣ ಮತ್ತು ಭ್ರಷ್ಟಾಚಾರ ವಿರೋಧಿ ಸಮಿತಿ ನಗರ ಅಧ್ಯಕ್ಷ ವಿಜಯ ಸಾಂಬ್ರೇಕರ ಮಾತನಾಡಿ, ಪರಿಸರ ರಕ್ಷಣೆ, ಸಮಾಜದ ಸುರಕ್ಷತೆ, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಿಸುವ ಉದ್ದೇಶದಿಂದ ಜಾಗೃತಿ ಮೂಡಿಸುತ್ತಿದ್ದೇವೆ. ಅದಕ್ಕಾಗಿ ಸಂಘಟಿತರಾಗಿ ಕೆಲಸ ಮಾಡುತ್ತಿದ್ದೇವೆ. ಮಾನವ ಅಧಿಕಾರ ದಿನಾಚರಣೆ ಉದ್ದೇಶವೇ ಅದು ಎಂದರು.
ಒಟ್ಟಿನಲ್ಲಿ ಭ್ರಷ್ಟಾಚಾರ ಹಾಗೂ ಶೋಷಣೆಮುಕ್ತ ಸಮಾಜ ನಿರ್ಮಿಸುವ ಉದ್ದೇಶ ಇರಿಸಿಕೊಂಡು ಮಾನವ ಅಧಿಕಾರ ಲೋಕ ಕಲ್ಯಾಣ ಮತ್ತು ಭ್ರಷ್ಟಾಚಾರ ವಿರೋಧಿ ಸಮಿತಿಯಿಂದ ಮಾನವ ಅಧಿಕಾರ ದಿನ ಆಚರಿಸಲಾಯಿತು.