ಹುಬ್ಬಳ್ಳಿ: ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಕೆಎಂಸಿಆರ್‌ಐ) ಉತ್ತರ ಕರ್ನಾಟಕ ಭಾಗದ ಸಂಜೀವಿನಿ. ಎಂಟತ್ತು ಜಿಲ್ಲೆಗಳ ರೋಗಿಗಳು ಹೆಚ್ಚಿನ ಚಿಕಿತ್ಸೆಗೆ ಕೆಎಂಸಿಆರ್ಐಯನ್ನು ಆಶ್ರಯಿಸಿದ್ದಾರೆ. ಆದರೆ, ಸರ್ಕಾರದಿಂದ ಸಿಗಬೇಕಾದ ಅನುದಾನದ ಕೊರತೆ ಸಂಸ್ಥೆಗೆ ಕಾಡುತ್ತಿದೆ.
ಹೀಗಾಗಿ ಪ್ರಸಕ್ತ ವರ್ಷದ ರಾಜ್ಯ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದು, 515 ಕೋಟಿ ರೂ. ಅಗತ್ಯ ಆರ್ಥಿಕತೆಯ ಬೇಡಿಕೆ ಮಂಡಿಸಿದೆ. ರಾಜ್ಯ ಸರ್ಕಾರಕ್ಕೆ ಅನುದಾನ ಸೇರಿ ಹಲವು ಯೋಜನೆಗಳ ಪ್ರಸ್ತಾವನೆ ರವಾನಿಸಿದ್ದು, ಆಸೆ ಕಂಗಳಿಂದ ಕಾಯುತ್ತಿದೆ. ಕಳೆದ ಬಾರಿಯೂ ರಾಜ್ಯ ಸರ್ಕಾರಕ್ಕೆ 417 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಆಗ ಸಿಕ್ಕಿದ್ದು ಬರೀ 233 ಕೋಟಿ ರೂಪಾಯಿ. ಈ ಬಾರಿಯೂ ಹಲವು ಯೋಜನೆಗಳ ಸಮೇತ ಬೇಡಿಕೆಯನ್ನು ರವಾನಿಸಿದ್ದು, ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಹೆಚ್ಚು ಅನುದಾನ ಸಿಗುವ ನಿರೀಕ್ಷೆ ಇಟ್ಟುಕೊಂಡಿದೆ.
ಕೆಎಂಸಿಆರ್‌ಐನ ವೈದ್ಯಕೀಯ ಸಿಬ್ಬಂದಿಗೇ ಪ್ರತಿ ವರ್ಷ ಸುಮಾರು 150 ಕೋಟಿ ರೂ. ಸಂಬಳ ಕೊಡಬೇಕು. ಇದು ಸೇರಿಯೂ ಅಭಿವೃದ್ಧಿ ಕಾರ್ಯಗಳಿಗೆ ಒಟ್ಟು 515 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದರೆ ಒಳಿತೆಂಬ ಲೆಕ್ಕಾಚಾರವಿಟ್ಟುಕೊಂಡಿದೆ.
ಈ ಎಲ್ಲ ಕೆಲಸಗಳಿಗೆ ಹಣ ಒದಗಿಸುವಂತೆ ಬೇಡಿಕೆ: ಈ ಕುರಿತಂತೆ ಕೆಎಂಸಿಆರ್‌ಐನ ನಿರ್ದೇಶ ಡಾ.ಎಸ್.ಎಫ್. ಕಮ್ಮಾರ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದು, “ವೈದ್ಯಕೀಯ ಶಿಕ್ಷಣ ಸಚಿವರ ಪ್ರಗತಿ ಪರಿಶೀಲನೆ ಸಭೆಯಲ್ಲಿ ಕೆಎಂಸಿಆರ್‌ಐನ ಬೇಡಿಕೆಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದರು. ಅದರಂತೆ ಸಿಬ್ಬಂದಿ ವೇತನ, ಮೂಲಭೂತ ಸೌಕರ್ಯಗಳು ಸೇರಿದಂತೆ ಹೆಚ್ಚಿನ ಘಟಕಗಳ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅದರಲ್ಲಿ ಪ್ರಮುಖವಾಗಿ ಪ್ರಾದೇಶಿಕ ಕ್ಯಾನ್ಸರ್ ಸೆಂಟರ್, ನೆಪ್ರೋ ನ್ಯೂರಾಲಜಿ ಘಟಕ, ಚಿಕ್ಕಮಕ್ಕಳ ಆಸ್ಪತ್ರೆಗೆ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ 515 ಕೋಟಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸರ್ಕಾರ ಈ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಕೊಡುವ ಸಾಧ್ಯತೆ ಇದೆ” ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಪ್ರಸ್ತಾವನೆಯಲ್ಲೇನಿದೆ?:
- 200 ಹಾಸಿಗೆಯ ಪ್ರಾದೇಶಿಕ ಕ್ಯಾನ್ಸರ್ ಕೇರ್ ಕೇಂದ್ರ
- ಲೆವೆಲ್-2 ಟ್ರಾಮಾ ಕೇರ್ ಸೆಂಟರ್
- ಪ್ರತ್ಯೇಕ ಪ್ಯಾರಾ ಮೆಡಿಕಲ್ ಕಾಲೇಜು
- ಒಳ ರಸ್ತೆಗಳ ನಿರ್ಮಾಣ
- ವಸತಿ ನಿಲಯ ಸ್ಥಳಗಳಲ್ಲಿ ಜಲನಿರೋಧಕ, ಯುಜಿಡಿ ಲೈನ್ ನವೀಕರಣ
- 750 ಕೆವಿಎ ಜನರೇಟರ್ ಅಗತ್ಯ
- ಕೇಂದ್ರ ಗ್ರಂಥಾಲಯದ ದುರಸ್ತಿ, ನವೀಕರಣ
- ಮಾದರಿ ವಿಶ್ರಾಂತಿ ಗೃಹ ನಿರ್ಮಾಣ
- ಸುಸಜ್ಜಿತ ಉಪಹಾರ ಗೃಹ
- 3 ಟೆಸ್ಲಾ ಎಂಆರ್‌ಐ ಯಂತ್ರ, 160 ಸ್ಲೈಸ್ ಸಿಟಿ ಸ್ಕ್ಯಾನ್ ಯಂತ್ರ
- 240 ಹಾಸಿಗೆಯ ಮೂತ್ರಪಿಂಡ ಹಾಗೂ ಮೂತ್ರಕೋಶ ವಿಭಾಗದ ಅಭಿವೃದ್ಧಿ
- ಚಿಕ್ಕಮಕ್ಕಳ ಆಸ್ಪತ್ರೆಯ 4-5 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುದಾನ
ಇಲ್ಲಿಗೆ ಉತ್ತರ ಕರ್ನಾಟಕದ 8 ಜಿಲ್ಲೆಗಳ ರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಾರೆ. ನಿತ್ಯ ಹೊರರೋಗಿಗಳ ಸಂಖ್ಯೆ 3 ಸಾವಿರಕ್ಕೂ ಹೆಚ್ಚಿದೆ. ಒಳ ರೋಗಿಗಳ ಸಂಖ್ಯೆ ಸಾವಿರ ಇದೆ. ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಕೈಗೆತ್ತಿಕೊಳ್ಳಲು ಅನುದಾನದ ಕೊರತೆ ಎದುರಿಸುತ್ತಿದ್ದು, ರಾಜ್ಯ ಸರ್ಕಾರ ಅನುದಾನದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದೆ.