ಬೆಂಗಳೂರು: ಸಿದ್ದರಾಮಯ್ಯ ವಿಪಕ್ಷದಲ್ಲಿದ್ದಾಗ ಇದ್ದ ದಲಿತಪರ ಕಾಳಜಿ ಅಧಿಕಾರಕ್ಕೆ ಬಂದ ಬಳಿಕ ಮರೆತುಹೋಯಿತೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಪರಿಶಿಷ್ಟರ ಹಣ ದುರ್ಬಳಕೆ ವಿರೋಧಿ ಹೋರಾಟ ಸಮಿತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಿತು. ಹೋರಾಟ ಸಮಿತಿ ಆಹ್ವಾನದ ಮೇರೆಗೆ ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ವಿಜಯೇಂದ್ರ, ಅಹಿಂದ ಹೆಸರಿನೊಂದಿಗೆ ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಕಣ್ಣೀರು ಒರೆಸುವುದಾಗಿ ಹೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದವರು. ಅವರು ಈ ಕರಾಳದಿನಕ್ಕೆ ಕಾರಣರು ಎಂದು ಟೀಕಿಸಿದರು.ಸಿದ್ದರಾಮಯ್ಯನವರು ಅನುಭವಿ ಮುಖ್ಯಮಂತ್ರಿ. ಅವರು ಅಸಮರ್ಥ ಎನ್ನುವುದಿಲ್ಲ. ಮುಖ್ಯಮಂತ್ರಿಗಳು ಅಸಹಾಯಕರಾಗಿದ್ದಾರಾ? ಅಥವಾ ದಲಿತರ ಮೇಲಿನ ಕಾಳಜಿ ಮರೆತುಹೋಗಿದೆಯೇ? ದಲಿತ ಸಮುದಾಯಕ್ಕೆ ಶಕ್ತಿ ಕೊಡಬೇಕಾದ ಹಣದ ದುರ್ಬಳಕೆ ಮಾಡುತ್ತಿರುವುದು ನ್ಯಾಯವೇ? ಎಂದು ಪ್ರಶ್ನಿಸಿದ ವಿಜಯೇಂದ್ರ, ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ, ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ದಲಿತರ ಕಾಲೊನಿಗಳಿಗೆ ಮೂಲಸೌಕರ್ಯಗಳನ್ನು ಕೊಟ್ಟು ಕಾಂಕ್ರೀಟ್ ರಸ್ತೆಗಳನ್ನು ನಿರ್ಮಾಣ ಮಾಡಲಾಗಿತ್ತು ಎಂದರು.