ಬೆಂಗಳೂರು: ಅಪರಿಚಿತ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದಿದ್ದ ಆರೋಪಿಯನ್ನು ಅರಸೀಕೆರೆ ರೈಲ್ವೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ನೇಪಾಳ ಮೂಲದ ಮೌಸಮ್ ಪಹಡಿ (25) ಬಂಧಿತ ಆರೋಪಿ. ಫೆಬ್ರವರಿ 13ರಂದು ಹಾಸನದ ರೈಲ್ವೆ ಜಂಕ್ಷನ್ ಸಮೀಪದ ನಿರ್ಮಾಣ ಹಂತದ ಟವರ್ ವ್ಯಾಗನ್ ಶೆಡ್‌ನಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿತ್ತು.
ಸಕಲೇಶಪುರದಲ್ಲಿ ರಸ್ತೆ ಕಾಮಗಾರಿ ಕೆಲಸದಲ್ಲಿದ್ದ ಆರೋಪಿ, ಫೆಬ್ರವರಿ 13ರಂದು ನೇಪಾಳಕ್ಕೆ ತೆರಳಲು ಬೆಂಗಳೂರಿನತ್ತ ಪ್ರಯಾಣಿಸುತ್ತಿದ್ದ. ಹಾಸನದ ರೈಲ್ವೆ ಜಂಕ್ಷನ್ ಸಮೀಪದ ಶೆಡ್ ಬಳಿ ಅಪರಿಚಿತ ಮಹಿಳೆಯನ್ನು ಗಮನಿಸಿದ್ದ ಆರೋಪಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಕೃತ್ಯದ ವೇಳೆ ಆಕೆ ಗಲಾಟೆ ಮಾಡಬಾರದು ಎಂದು ದುಪ್ಪಟ್ಟದಿಂದ ಕತ್ತು ಬಿಗಿದು ಹತ್ಯೆಗೈದಿದ್ದ. ನಂತರ ತಲೆ ಮೇಲೆ ಕಲ್ಲು ಎತ್ತಿಹಾಕಿ, ರೈಲಿನ ಮೂಲಕ ಬೆಂಗಳೂರು ತಲುಪಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಅರಸೀಕೆರೆ ರೈಲ್ವೇ ಠಾಣೆ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳು ಹಾಗೂ ತಾಂತ್ರಿಕ ವಿಶ್ಲೇಷಣೆಯ ಬಳಿಕ ಬೆಂಗಳೂರಿನಲ್ಲಿದ್ದ ಆರೋಪಿಯನ್ನು ಬಂಧಿಸಿದ್ದಾರೆ.