ಬೆಂಗಳೂರು: ಗ್ರಾಮ ಆಡಳಿತ ಅಧಿಕಾರಿಗಳ ಕೆಲಸ ಸುಗಮಗೊಳಿಸಲು 4 ಸಾವಿರ ಲ್ಯಾಪ್ಟಾಪ್ ನೀಡಲು ಕಾರ್ಯಾದೇಶ ನೀಡಲಾಗಿದೆ. ಇನ್ನೂ 2 ಸಾವಿರ ಲ್ಯಾಪ್ಟಾಪ್ ನೀಡಲು ಸರ್ಕಾರ ಅನುಮೋದಿಸಿದ್ದು, ಇನ್ನು 6 ತಿಂಗಳಲ್ಲಿ ವಿತರಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಗ್ರಾಮ ಆಡಳಿತ ಅಧಿಕಾರಿಗಳ ಛಾವಾಡಿಗಳು ಶಿಥಿಲಗೊಂಡಿದ್ದು, ಅವುಗಳ ಪುನರ್ ನಿರ್ಮಾಣಕ್ಕೆ ಪರಿಶೀಲಿಸಲಾಗುತ್ತಿದೆ. ಅಲ್ಲದೇ, ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸ್ಥಳಾವಕಾಶ ಕಲ್ಪಿಸುವ ಸಂಬಂಧ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವರ ಜೊತೆ ಮಾತುಕತೆ ನಡೆಸಲಾಗುವುದು. ದಾಖಲೀಕರಣ ಸುರಕ್ಷತೆಗಾಗಿ ಕಪಾಟು ಸೇರಿದಂತೆ ಇನ್ನಿತರ ಸೌಲಭ್ಯ ಒದಗಿಸಲಾಗುವುದು. ಈಗಾಗಲೇ 4 ಸಾವಿರ ಲ್ಯಾಪ್ಟಾಪ್ ನೀಡಲು ಕಾರ್ಯಾದೇಶ ನೀಡಲಾಗಿದೆ. ಇನ್ನೂ 2 ಸಾವಿರ ಲ್ಯಾಪ್ಟಾಪ್ ನೀಡಲು ಉದ್ದೇಶಿಸಿದ್ದು, ಮುಂದಿನ 6 ತಿಂಗಳಲ್ಲಿ ನೀಡಲಾಗುವುದು ಎಂದು ಬಿಜೆಪಿ ಸದಸ್ಯ ಕೇಶವಪ್ರಸಾದ್ ಕೇಳಿದ ಪ್ರಶ್ನೆಗೆ ಉತ್ತರಿಸಿದರು.ಗ್ರಾಮ ಲೆಕ್ಕಾಧಿಕಾರಿಗಳ ಸಮಸ್ಯೆ ಪರಿಹರಿಸಿದರೂ ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಕಳೆದ ಅಕ್ಟೋಬರ್ನಲ್ಲಿ ಸರ್ಕಾರ ವಿರುದ್ಧ ಅನಿರ್ಧಿಷ್ಟಾವಧಿ ಧರಣಿ ನಡೆಸಿದ್ದರೆಂಬ ಕೇಶವ ಪ್ರಸಾದ್ ಮರುಪ್ರಶ್ನೆಗೆ ಉತ್ತರಿಸಿದ ಸಚಿವರು, ಗ್ರಾಮ ಲೆಕ್ಕಿಗರು ಪ್ರತಿಭಟನೆ ಮಾಡಿದ್ದು ,ಕಚೇರಿ ಇಲ್ಲವೆಂದಲ್ಲ. ಜನಪರವಾಗಿ ಸರ್ಕಾರ ಕೆಲಸ ಮಾಡಿದ್ದಕ್ಕಾಗಿ… ಪೌತಿ ಖಾತೆ ಬದಲಾವಣೆಯನ್ನ ಆಂದೋಲನ ಮಾದರಿಯಲ್ಲಿ ಮಾಡಕೂಡದು ಎಂದು ಪಟ್ಟುಹಿಡಿದಿದ್ದರು. ರಾಜ್ಯದಲ್ಲಿ 51.88 ಲಕ್ಷ ಕೃಷಿ ಭೂಮಿಗಳು ಮೃತರಾದವರ ಹೆಸರಿನಲ್ಲಿವೆ. ಇದು ಯಾರಿಗೆ ಶೋಭೆ ತರುತ್ತೆ? ಇದನ್ನ ಸರಿಪಡಿಸಲು ಪೌತಿ ಖಾತೆ ಅಭಿಯಾನ ಕೈಗೊಂಡಿದ್ದರಿಂದ ಗ್ರಾಮ ಲೆಕ್ಕಿಗರು ಪ್ರತಿಭಟಿಸಿದ್ದರು. ಈ ಬಗ್ಗೆ ಎಸ್ಮಾ ಜಾರಿ ಬಗ್ಗೆ ಸಲಹೆ ಬಂದಿತ್ತು. ಇದನ್ನ ತಿರಸ್ಕರಿಸಿ ಅವರೊಂದಿಗೆ ಮಾತನಾಡಿ ವಿಶ್ವಾಸಕ್ಕೆ ತೆಗೆದುಕೊಂಡಿದ್ದೇವೆ. ಅವರ ನ್ಯಾಯಯುತ ಬೇಡಿಕೆಗಳನ್ನ ಈಡೇರಿಸುವುದಕ್ಕೆ ಪ್ರಯತ್ನಿಸಲಾಗುವುದು ಎಂದರು.