ಬೆಂಗಳೂರು, ಫೆಬ್ರವರಿ 24: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆಗೆ ಶೀಘ್ರದಲ್ಲಿಯೇ ಎಸ್ಕಾಂಗಳು ಅಂತ್ಯ ಹಾಡಲಿವೆಯೇ? ಇಂತಹದೊಂದು ಅನುಮಾನಕ್ಕೆ ಕೆಲವು ವರದಿಗಳು ಕಾರಣವಾಗಿದ್ದು, ಇದರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗೃಹಜ್ಯೋತಿ ಹಣವನ್ನು ಸರ್ಕಾರ ಮುಂಚಿತವಾಗಿ ಪಾವತಿ ಮಾಡಬೇಕು. ಇಲ್ಲವಾದರೆ, ಆ ದುಡ್ಡನ್ನು ಜನರಿಂದಲೇ ವಸೂಲಿ ಮಾಡಲು ಅವಕಾಶ ಒದಗಿಸಬೇಕು ಎಂದು ಮನವಿ ಮಾಡಿ ಕರ್ನಾಟಕದ ವಿವಿಧ ಎಸ್ಕಾಂಗಳು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಮನವಿ ಮಾಡಿರುವುದಾಗಿ ವರದಿಯಾಗಿದೆ. ಒಂದು ವೇಳೆ ಈ ಪ್ರಸ್ತಾವನೆಗೆ ಅನುಮತಿ ಸಿಕ್ಕಿದರೆ, ಎಸ್ಕಾಂಗಳು ವಿದ್ಯುತ್ ಬಿಲ್ಲನ್ನು ಗ್ರಾಹಕರಿಂದಲೇ ವಸೂಲಿ ಮಾಡಲಿವೆ. ಹಾಗಾದರೆ ಗೃಹಜ್ಯೋತಿ ಯೋಜನೆಯ ಪ್ರಯೋಜನ ಜನರಿಗೆ ಸಿಗಲಾರದು.
ಈ ಮಾಧ್ಯಮ ವರದಿಗಳ ಬೆನ್ನಲ್ಲೇ, ಸರ್ಕಾರದ ವಿರುದ್ಧ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯೇಂದ್ರ ಹೇಳಿದ್ದೇನು?
ಬಿಟ್ಟಿ ಭಾಗ್ಯಗಳಲ್ಲಿ ಒಂದಾದ ಗೃಹ ಜ್ಯೋತಿ ನಂದಿಸಲು ಎಸ್ಕಾಂಗಳು ಸನ್ನದ್ಧವಾಗಿವೆ. 15 ಬಾರಿ ಬಜೆಟ್ ಮಂಡಿಸಿರುವ ದಾಖಲೆ ತಮ್ಮದೆಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಿಟ್ಟಿ ಭಾಗ್ಯಗಳಿಗೆ ಹಣ ಸರಿದೂಗಿಸಲು ಸಮತೋಲನ ಕಳೆದುಕೊಂಡಿರುವುದು ಅವರು ಅಧಿಕಾರಕ್ಕೆ ಬಂದ ದಿನದಿಂದಲೂ ಅನಾವರಣಗೊಳ್ಳುತ್ತಿದೆ. ಆರ್ಥಿಕ ದೂರದೃಷ್ಟಿತ್ವವಿಲ್ಲದ, ಬದ್ಧತೆಯಿಲ್ಲದ ಮತ ಬ್ಯಾಂಕ್ ಆಧಾರಿತ ಯೋಜನೆಗಳು ಸೊರಗುತ್ತಿದೆ, ಅಭಿವೃದ್ಧಿ ಎನ್ನುವುದು ಗಗನಕುಸುಮವಾಗಿದೆ, ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರನ್ನು ಹೈರಾಣಾಗಿಸುತ್ತಿದೆ. ಇದರ ನಡುವೆ ಪಂಚ ಗ್ಯಾರಂಟಿಯ ಯೋಜನೆಗಳು ತೋರಿಕೆಗೆ, ಹೇಳಿಕೆಗೆ ಮಾತ್ರ ಎಂಬಂತೆ ಜನರಿಗೆ ತಲುಪುವಲ್ಲಿ ಬಹುತೇಕ ವಿಫಲವಾಗಿವೆ ಎಂದು ವಿಜಯೇಂದ್ರ ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಹಣ ಸ್ಥಗಿತಗೊಂಡಂತೆ ಕಾಣುತ್ತಿದೆ, ಅನ್ನಭಾಗ್ಯ ಯೋಜನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಕೊಡುವ ಗರೀಬ್ ಕಲ್ಯಾಣ್ ಅನ್ನ ಯೋಜನೆಯ 5 ಕೆಜಿ ಅಕ್ಕಿಯ ಹೊರತುಪಡಿಸಿ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಹೆಚ್ಚುವರಿ 5 ಕೆಜಿಯ ಅಕ್ಕಿಯೂ ಇಲ್ಲ, ಬದಲಾಗಿ ಹಣವೂ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿಲ್ಲ. ಯುವ ನಿಧಿ ಯೋಜನೆ ಅರ್ಜಿ ಕರೆಯುವ ಪ್ರಕಟಣೆಗಳನ್ನು ಬಿಟ್ಟರೆ ಯುವಜನರ ಖಾತೆಗಳಿಗೆ ಜಮೆಯಾದ ಬಗ್ಗೆ ಈವರೆಗೆ ವಿವರಗಳೇ ಲಭ್ಯವಾಗಿಲ್ಲ, ಶಕ್ತಿ ಯೋಜನೆಯಿಂದಾಗಿ ಕೆ.ಎಸ್.ಆರ್.ಟಿ.ಸಿ ಈಗಾಗಲೇ ನಷ್ಟದ ಹಾದಿ ಹಿಡಿದಿದೆ, ಹೆಚ್ಚುವರಿ ದರ ಏರಿಕೆ ಪರೋಕ್ಷವಾಗಿ ಪ್ರಯಾಣಿಕರ ಮೇಲೆ ಹೇರಲಾಗಿದೆ. ಇದೀಗ ಗೃಹ ಜ್ಯೋತಿ ಯೋಜನೆಗೆ ಸರ್ಕಾರ ಎಸ್ಕಾಂ ಗಳಿಗೆ ಹಣ ಪಾವತಿಸದ ಪರಿಣಾಮ ಯೋಜನೆ ಫಲಾನುಭವಿಗಳಿಂದಲೇ ವಸೂಲಿ ಮಾಡುವುದಕ್ಕಾಗಿ ಅಧಿಕಾರಿಗಳು ಸಜ್ಜಾಗಿ ನಿಂತಿದ್ದಾರೆ. ಆ ಮೂಲಕ ಗೃಹ ಜ್ಯೋತಿಗೆ ಇತಿಶ್ರೀ ಹಾಡುವ ಮುನ್ಸೂಚನೆ ನೀಡಿದ್ದಾರೆ ಎಂದು ವಿಜಯೇಂದ್ರ ಪತ್ರಿಕಾ ವರದಿಯ ತುಣುಕನ್ನು ಉಲ್ಲೇಖಿಸಿ ಆರೋಪಿಸಿದ್ದಾರೆ.