ಬೆಂಗಳೂರು: ಡಿ.ಕೆ. ಶಿವಕುಮಾರ ಅವರಿಗೆ ವಿರೋಧವೆಂದಿನೂ ಇಲ್ಲ. ನಾವು ನಮ್ಮ ಹಕ್ಕುಗಳನ್ನು ಕೇಳಿದ್ದೇವೆ. ನಾವೆಲ್ಲರೂ ಒಂದೇ ಪಕ್ಷದಲ್ಲಿದ್ದೇವೆ. ಸಿಎಂ ಸಿದ್ಧರಾಮಯ್ಯನವರ ಕೊಡುಗೆ ಕಾಂಗ್ರೆಸಗೆ ಅಪಾರವಾಗಿದ್ದು, ಒಂದು ವೇಳೆ ನಿವೃತ್ತಿಯಾದರೂ ಕೂಡ ಪಕ್ಷಕ್ಕೆ ಅವರ ಮಾರ್ಗದರ್ಶನ ಅತ್ಯವಶ್ಯಕವೆಂದು ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವೆ ಸತೀಶ ಜಾರಕಿಹೊಳಿ ಅವರು ತಿಳಿಸಿದರು.
ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಿಎಂ ಸಿದ್ಧರಾಮಯ್ಯನವರು ನಮಗೆ ಬೇಕೆ ಬೇಕು. ಒಂದು ವೇಳೆ ಅವರು ರಾಜಕೀಯ ನಿವೃತ್ತಿಯಾದರೂ ಕೂಡ ಪಕ್ಷದ ಪರವಾಗಿ ಕೆಲಸ ಮಾಡಬೇಕು. ಪಕ್ಷಕ್ಕೆ ಅವರ ಕೊಡುಗೆ ಅಪಾರವಾಗಿದೆ. ಸ್ಥಾನದಲ್ಲಿ ಸಿದ್ಧರಾಮಯ್ಯನವರು ಇಲ್ಲದೇ ಇದ್ದರೂ ಕೂಡ ಅವರ ಅನುಭವ ಪಕ್ಷಕ್ಕೆ ಮಾರ್ಗದರ್ಶನ. ಮುಂದಿನ ಚುನಾವಣೆ ಗೆಲ್ಲಲ್ಲು ಅನುಕೂಲ ಎಂದರು. ಇನ್ನು ಸಿಎಂ ಬದಲಾವಣೆ ಬಗ್ಗೆ ನಮಗೆ ಮಾಹಿತಿಯಿಲ್ಲ. ಸದ್ಯಕ್ಕೆ ಅವರೇ ಸಿಎಂ ಆಗಿದ್ದು, ಒಳ್ಳೆಯ ಆಡಳಿತವನ್ನು ಕೊಡುತ್ತಿದ್ದಾರೆ ಎಂದರು.
ಒಬ್ಬರಿಗೆ ಒಂದೇ ಹುದ್ದೆ ಎಂಬ ಎಐಸಿಸಿ ಅಧ್ಯಕ್ಷರ ಸೂಚನೆಗೆ ಸಂಬಂಧಿಸಿದಂತೆ ಪರೋಕ್ಷವಾಗಿ ಡಿ.ಕೆ.ಶಿವಕುಮಾರ ಅವರಿಗೆ ವಿರೋಧ ವ್ಯಕ್ತಪಡಿಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ನಾವೆಲ್ಲರೂ ಒಂದೇ ಪಕ್ಷದಲ್ಲಿದ್ದೇವೆ. ನಮ್ಮ ಹಕ್ಕನ್ನು ನಾವು ಕೇಳಿದ್ದೇವೆ. ವಿರೋಧ ಮಾಡುವ ಪ್ರಶ್ನೆಯೇ ಇಲ್ಲ. ಎಲ್ಲರಿಗೂ ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಸ್ವತಂತ್ರ್ಯತೆ ಇದೆ. ಅದನ್ನ ಹೈಕಮಾಂಡ್ ಅವರ ಮುಂದೆ ಹೇಳಿದ್ದೇವೆ ಎಂದರು.
ಸಿಎಂ ಮತ್ತು ರಾಜ್ಯಾಧ್ಯಕ್ಷ ಬದಲಾವಣೆ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಇದರ ಬಗ್ಗೆ ನಾವು ಹೇಳಲಾಗುವುದಿಲ್ಲ ಎಂದರು. ಎಸ್ಸಿ-ಎಸ್.ಟಿ. ಸಮಾವೇಶಕ್ಕೆ ಹೈಕಮಾಂಡ್ ಅನುಮತಿ ಕೊಟ್ಟಿರುವ ಬಗ್ಗೆ ರಾಜಣ್ಣ ಅವರೊಂದಿಗೆ ಚರ್ಚೆ ನಡೆಸಲಾಗುವುದು. ದೆಹಲಿಯಿಂದ ನಿನ್ನೆ ಸಂಜೆ ರಾಜಣ್ಣ ಅವರು ಆಗಮಿಸಿದ್ದು. ಅಲ್ಲಿ ನಡೆದಿರುವ ಚರ್ಚೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುವುದು ಎಂದರು.