ಹಾವೇರಿ: ಜಿಲ್ಲೆಯಲ್ಲಿ ಇಂದು ಒರ್ವ ಕೋವಿಡ್-19 ನಿಂದ ಮೃತಪಟಿದ್ದು, ಪಿಡಿಒ ಸೇರಿ ಒಟ್ಟು ಆರು ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಸವಣೂರಿನ ಮಾಸೂರ ನಗರದ 45 ವರ್ಷದ ವ್ಯಕ್ತಿ ತೀವ್ರ ಜ್ವರ ಮತ್ತು ಉಸಿರಾಟದ ತೊಂದರೆಯಿಂದ ಜುಲೈ 9ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಮರುದಿನ ಜುಲೈ 10ರಂದು ಮೃತಪಟ್ಟಿದ್ದಾರೆ. ಆ ದಿನವೇ ಇವರ ಗಂಟಲು ದ್ರವವನ್ನು ಸಂಗ್ರಹಿಸಿ ಲ್ಯಾಬ್‍ಗೆ ಕಳುಹಿಸಲಾಗಿತ್ತು. ಜುಲೈ 12ರಂದು ಪಾಸಿಟಿವ್ ಎಂದು ದೃಢಪಟ್ಟಿತ್ತು.
ಹಾವೇರಿ ತಾಲೂಕು ನೀರಲಗಿ ಗ್ರಾಮದ 36 ವರ್ಷದ ವ್ಯಕ್ತಿ, ಹೊಸರಿತ್ತಿ ಕುರುಬರ ಓಣಿಯ 41 ವರ್ಷದವ, ಹಾವೇರಿ ನಗರ ವೈಭವಲಕ್ಷ್ಮೀ ಪಾರ್ಕ್ ನಿವಾಸಿ 49 ವರ್ಷದ ಪುರುಷನಿಗೆ ಸೋಂಕು ಧೃಡಪಟ್ಟಿದೆ. ರೋಗಿ ನಂ.31721 ಪ್ರಾಥಮಿಕ ಸಂಪರ್ಕದ ಮೇವುಂಡಿ ಪಿಡಿಓಗೆ ಕೊರೊನಾ ತಗುಲಿದೆ. ಅಲ್ಲದೆ ಹಾವೇರಿ ಶಿವಬಸವೇಶ್ವರ ನಗರದ ನಿವಾಸಿ 39 ವರ್ಷದ ಮಹಿಳೆ ಹಾಗೂ ವೆಂಕಟಾಪುರ ಗ್ರಾಮದ 37 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ. ಸೋಂಕಿತರ ಗಂಟಲು ದ್ರವದ ಮಾದರಿಯನ್ನು ಜುಲೈ 7, 8 ಹಾಗೂ 9 ರಂದು ಲ್ಯಾಬ್‍ಗೆ ಕಳುಹಿಸಲಾಗಿತ್ತು. ಜುಲೈ 12ರಂದು ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ನಿಗದಿತ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ನಿಯಮಾನುಸಾರ ಸೋಂಕಿತರ ನಿವಾಸ ಇರುವ ಪ್ರದೇಶದ 100 ಮೀಟರ್ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಸೋಂಕಿತರ ನಗರ ಪ್ರದೇಶದ ನಿವಾಸದ 200ಂ ಮೀ.ಪ್ರದೇಶ ಹಾಗೂ ನೀರಲಗಿ, ಹೊಸರಿತ್ತಿ ವೆಂಕಟಾಪುರ ಗ್ರಾಮವನ್ನು ಬಫರ್ ಝೋನ್ ಎಂದು ಘೋಷಿಸಲಾಗಿದೆ. ಇನ್ಸಿಡೆಂಟಲ್ ಕಮಾಂಡರ್ ಆಗಿ ಆಯಾ ತಾಲೂಕು ತಹಶೀಲ್ದಾರರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಇಂದು 33 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಈ ವರೆಗೆ 308 ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ. 170 ಜನ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಏಳು ಜನ ಮೃತಪಟ್ಟಿದ್ದಾರೆ. ಇನ್ನೂ 131 ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.