ಮಾಧ್ಯಮಗಳ ಊಹಾಪೋಹದಿಂದ ಸರ್ಕಾರಕ್ಕೆ ಡಿಸ್ಟರ್ಬ್ ಎಂದ ಎಐಸಿಸಿ ಅಧ್ಯಕ್ಷರು
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ರಾಜ್ಯ ಕಾಂಗ್ರೆಸ್ನಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಅಧ್ಯಕ್ಷ ಸ್ಥಾನದಲ್ಲಿ ಕೂರಲು ಕಾಂಗ್ರೆಸ್ನಲ್ಲೇ ಸದ್ದಿಲ್ಲದೆ ಪೈಪೋಟಿ ಶುರುವಾಗಿದೆ. ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಯ ಸುಳಿವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನೀಡಿದ್ದಾರೆ. ಅಲ್ಲದೇ ಮಾಧ್ಯಮಗಳ ಊಹಾಪೋಹಗಳಿಂದ ಸರ್ಕಾರಕ್ಕೆ ಡಿಸ್ಟರ್ಬ್ ಆಗುತ್ತಿದೆ ಎಂದಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಒಡಿಶಾದಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಮಾಡಿ ಬಂದಿದ್ದೇನೆ. ಅಲ್ಲಿ ಹಿಂದುಳಿದ ವರ್ಗದವರು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಬೇರೆ ರಾಜ್ಯಗಳಲ್ಲೂ ಕೆಲವೇ ದಿನಗಳಲ್ಲಿ ಅಧ್ಯಕ್ಷರ ಬದಲಾವಣೆ ಆಗುತ್ತೆ. ಈ ಬಗ್ಗೆ ನಿರ್ದಿಷ್ಟವಾಗಿ ನಾನು ಹೇಳಲು ಆಗಲ್ಲ. ನಾವು ಒಂದೊಂದು ರಾಜ್ಯಗಳಲ್ಲಿ ಬದಲಾವಣೆ ಮಾಡುತ್ತಿದ್ದೇವೆ. ಒಂದೆರಡು ದಿನದಲ್ಲಿ ಮತ್ತೆ ಒಂದೆರಡು ರಾಜ್ಯಗಳಲ್ಲಿ ಬದಲಾವಣೆ. 8 ದಿನಗಳಲ್ಲಿ ಎಲ್ಲಾ ಬದಲಾವಣೆ ಮುಗಿಯುತ್ತೆ ಎಂದು ಹೇಳಿದರು.
ಇನ್ನು ಸಚಿವ ಸತೀಶ ಜಾರಕಿಹೊಳಿ ಅವರ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಕರ್ನಾಟಕದವರು ನಮ್ಮವರೇಯಾದವರು ಎಐಸಿಸಿ ಅಧ್ಯಕ್ಷರಾಗಿದ್ದಾರೆಂದು ಭೇಟಿಯಾಗಿ ಮಾತನಾಡುತ್ತಾರೆ. ಇಂತಹ ಊಹಾಪೋಹಗಳನ್ನು ದೊಡ್ಡವು ಮಾಡಬೇಡಿ. ಸರ್ಕಾರಗಳನ್ನು ಅಸ್ಥಿರಗೊಳಿಸಲು ಮಾಧ್ಯಮಗಳ ಇಂತಹ ಸುದ್ಧಿಗಳೇ ಕೆಲವೊಂದು ಬಾರಿ ಗೊಂದಲಕ್ಕೆ ಕಾರಣವಾಗುತ್ತಿವೆ ಎಂದರು.