ಹಾವೇರಿ: ಶಿವಲಿಂಗ ನಗರದಲ್ಲಿರುವ ಬನಶಂಕರಿಯ ಜಾತ್ರಾ ಮಹೋತ್ಸವದ ವಿಶೇಷ ಪಲ್ಲೇದ ಹಬ್ಬವನ್ನು ಗುರುವಾರ ಆಚರಿಸಲಾಯಿತು. ಸುಮಾರು 108 ತರಕಾರಿಗಳಿಂದ ಬನಶಂಕರಿ ದೇವಿಯನ್ನು ಅಲಂಕರಿಸುವುದು ಈ ಪಲ್ಲೇದ ಹಬ್ಬದ ವಿಶೇಷ.
ನೂರಾರು ವರ್ಷಗಳ ಹಿಂದೆ ಭೂಮಿಯಲ್ಲಿ ಬರಗಾಲ ತಾಂಡವಾಡುತ್ತಿತ್ತು. ಜನ ಜಾನುವಾರುಗಳು ನೀರಿಲ್ಲದೆ ಪರದಾಡುತ್ತಿದ್ದ ವೇಳೆ ಋಷಿಮುನಿಗಳು ದೇವಿಯ ಮೊರೆ ಹೋಗುತ್ತಾರೆ. ದೇವಿ ಬನಶಂಕರಿ ತನ್ನ ದೇಹದ ಉಷ್ಣಾಂಶ ಹೆಚ್ಚಿಸಿಕೊಂಡು ಶಾಕಾಂಬರಿಯಾಗುತ್ತಾಳೆ.
ಅಲ್ಲದೆ ಬರದಿಂದ ತತ್ತರಿಸಿದ ಭೂಮಿಗೆ ಮಳೆ ತರುತ್ತಾಳೆ. ಈ ರೀತಿ ತಂದ ಮಳೆಯಲ್ಲಿ ಬೆಳೆದ ತರಕಾರಿಗಳನ್ನು ದೇವಿಗೆ ಅಲಂಕಾರ ಮಾಡಲಾಗುತ್ತದೆ. ಅಂದಿನಿಂದ ಇದಕ್ಕೆ ಪಲ್ಲೇದ ಹಬ್ಬ ಎಂದು ಕರೆಯಲಾಗುತ್ತದೆ ಎಂಬುದು ಭಕ್ತರ ನಂಬಿಕೆ.ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಬನಶಂಕರಿಯಲ್ಲಿ ಈ ರೀತಿಯ ಆಚರಣೆಯನ್ನು ಹಲವು ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. ಹಾವೇರಿಯ ಬನಶಂಕರಿ ದೇವಸ್ಥಾನದಲ್ಲಿ ಕಳೆದ ಐದು ವರ್ಷಗಳಿಂದ ಈ ಆಚರಣೆ ಮಾಡಲಾಗುತ್ತಿದೆ. ಒಂದು ದಿನ ಮುಂಚಿತವಾಗಿ ಬರುವ ಸುಮಂಗಲೆಯರು ಮಾರುಕಟ್ಟೆಗೆ ತೆರಳಿ ವೈವಿಧ್ಯಮಯ ತರಕಾರಿ ಖರೀದಿ ಮಾಡುತ್ತಾರೆ. ನಂತರ ಅವುಗಳನ್ನು ತಂದು ಸ್ವಚ್ಛಗೊಳಿಸಿ ಮಾಲೆಗಳನ್ನಾಗಿ ಮಾಡುತ್ತಾರೆ.
ಅದಾದ ನಂತರ ದೇವಿಗೆ ವಿವಿಧ ಅಭಿಷೇಕ ಸಲ್ಲಿಸುವ ಅರ್ಚಕರು ತರಕಾರಿಗಳಿಂದ ದೇವಿಯನ್ನು ಅಲಂಕರಿಸುತ್ತಾರೆ.ಇಲ್ಲಿ ಯಾವ ತರಕಾರಿ ಸಹ ಬಿಡದೆ ಕೆಲವೊಂದು ಸೊಪ್ಪುಗಳಿಂದ ಸಹ ತಾಯಿಯನ್ನು ಅಲಂಕರಿಸಲಾಗುತ್ತದೆ. ಈ ಬಾರಿ ಸುಮಾರು ಎರಡು ಗಂಟೆಗೂ ಅಧಿಕ ಕಾಲ ಅರ್ಚಕರು ಮತ್ತು ಭಕ್ತರು ಶ್ರಮಿಸಿ ಬದನೆಕಾಯಿ, ಸೌತೆಕಾಯಿ, ಹಿರೇಕಾಯಿ, ಬೀನ್ಸ್, ಅವರೇ, ಮೆಣಸಿನಕಾಯಿ, ಸಾಂಬಾರಸವತೆ, ಹೂಕೋಸು, ಈರುಳ್ಳಿ, ಗಜ್ಜರಿ, ಮೂಲಂಗಿ, ಆಲೂಗಡ್ಡೆ, ಶುಂಠಿ, ಬೆಟ್ಟದ ನೆಲ್ಲಿಕಾಯಿ ಸರದಿಂದ ದೇವಿಯನ್ನು ಅಲಂಕರಿಸಿದ್ದಾರೆ. ಈ ವಿಶಿಷ್ಟ ಅಲಂಕಾರ ನೋಡಲು ಭಕ್ತರು ಬನಶಂಕರಿ ದೇವಸ್ಥಾನಕ್ಕೆ ಬೃಹತ್ ಸಂಖ್ಯೆಯಲ್ಲಿ ಆಗಮಿಸಿ ಕಣ್ತುಂಬಿಕೊಂಡರು.