ರಾಯಚೂರು: ಜಿಲ್ಲೆಯಲ್ಲಿ ಕಳೆದ 15 ದಿನಗಳಲ್ಲಿ 250 ಪಾಸಿಟಿವ್ ಪ್ರಕರಣ ದಾಖಲಾದ ಹಿನ್ನೆಲೆ ಒಂದು ವಾರ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ರಾಯಚೂರು ಹಾಗೂ ಸಿಂಧನೂರು ನಗರಗಳನ್ನ ಮಾತ್ರ ಜುಲೈ 15 ರಿಂದ 22 ರವರೆಗೆ ಸಂಪೂರ್ಣ ಲಾಕ್‍ಡೌನ್ ಮಾಡಲಾಗುತ್ತಿದೆ ಅಂತ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಹೇಳಿದ್ದಾರೆ. ಇನ್ನುಳಿದ ತಾಲೂಕು ಪ್ರದೇಶಗಳಲ್ಲಿ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ಬಳಿಕ ಸಿಎಂ ಸೂಚನೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿ ಐಎಲ್‍ಐ, ಸಾರಿ ಪ್ರಕರಗಳು ಹೆಚ್ಚಾಗುತ್ತಿದ್ದು, ಕಲಬುರಗಿ, ಬೆಂಗಳೂರಿನಿಂದ ಬಂದವರಲ್ಲೂ ಸೋಂಕು ಹೆಚ್ಚಾಗಿ ಕಂಡುಬರುತ್ತಿದೆ. ಸೋಂಕಿತರ ಸಂಪರ್ಕದಿಂದ ಹೆಚ್ಚು ಜನರಿಗೆ ಸೋಂಕು ತಗುಲುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ 8 ಜನರು ಮರಣ ಹೊಂದಿದ್ದಾರೆ. ಹೀಗಾಗಿ ಲಾಕ್ ಡೌನ್ ಮಾಡಲಾಗುತ್ತಿದೆ. ರಾಯಚೂರು ಹಾಗೂ ಸಿಂಧನೂರಿನಲ್ಲಿ ತುರ್ತು ಮತ್ತು ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ಜಿಲ್ಲೆಯಾದ್ಯಂತ ಮದುವೆಗಳನ್ನು ಮನೆಯಲ್ಲಿ ಮಾಡಬೇಕು 20 ಜನರಿಗೆ ಮಾತ್ರ ಅವಕಾಶ. ಎಲ್ಲಾ ಕಲ್ಯಾಣ ಮಂಟಪಗಳನ್ನು ಮುಚ್ಚಲಾಗುವುದು. ಧಾರ್ಮಿಕ ಕಾರ್ಯಕ್ರಮಗಳಿಗೂ ನಿರ್ಭಂದವಿದೆ. ಸರ್ಕಾರಿ ಕಚೇರಿಗಳು ಆರಂಭವಾಗಿರುತ್ತವೆ. ಸಿಟಿ ಬಸ್‍ಗಳ ಸಂಚಾರವಿಲ್ಲ. ಬೇರೆ ಊರಿಗೆ ಹೋಗುವ ಬಸ್ ಗಳಿಗೆ ನಿರ್ಬಂಧವಿಲ್ಲ. ಜನ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಹೊರ ಬರಬೇಕು. ಪ್ರತಿಭಟನೆ, ರಾಜಕೀಯ ಚಟುವಟಿಕೆಗಳಿಗೆ ನಿರ್ಭಂದ ಹೇರಲಾಗಿದೆ ಅಂತ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಹೇಳಿದ್ದಾರೆ.