ನವದೆಹಲಿ, ಜನವರಿ 14: ಭಾರತದ ರೀಟೇಲ್ ಹಣದುಬ್ಬರ ದರ ಡಿಸೆಂಬರ್ ತಿಂಗಳಲ್ಲಿ ಶೇ. 5.22ರಷ್ಟಿದೆ. ಹಿಂದಿನ ತಿಂಗಳು ಮತ್ತು ಹಿಂದಿನ ವರ್ಷದಕ್ಕೆ ಹೋಲಿಸಿದರೆ ಹಣದುಬ್ಬರ ಇಳಿಕೆ ಆಗಿದೆ. 2023ರ ಡಿಸೆಂಬರ್ ತಿಂಗಳಲ್ಲಿ ಹಣದುಬ್ಬರ ಶೇ. 5.69ರಷ್ಟಿತ್ತು. 2024ರ ನವೆಂಬರ್ ತಿಂಗಳಲ್ಲಿ ಶೇ. 5.48ರಷ್ಟಿತ್ತು.
ಸರ್ಕಾರ ನಿನ್ನೆ ಸೋಮವಾರ ಡಿಸೆಂಬರ್ ತಿಂಗಳ ಹಣದುಬ್ಬರ ದರದ ದತ್ತಾಂಶವನ್ನು ಬಿಡುಗಡೆ ಮಾಡಿದೆ. ಡಿಸೆಂಬರ್ ತಿಂಗಳಲ್ಲಿ ಆಹಾರ ವಸ್ತು ವಿಭಾಗದಲ್ಲಿ ಬೆಲೆ ಏರಿಕೆ ಪ್ರಮಾಣ ಕಡಿಮೆ ಇದ್ದರಿಂದ ಹಣದುಬ್ಬರ ತುಸು ಇಳಿಕೆ ಆಗಿದೆಆಹಾರವಸ್ತುಗಳ ಗುಂಪಿನ ಹಣದುಬ್ಬರ 2024ರ ನವೆಂಬರ್ನಲ್ಲಿ ಮತ್ತು 2023ರ ಡಿಸೆಂಬರ್ನಲ್ಲಿ ಶೇ. 9ಕ್ಕಿಂತಲೂ ಹೆಚ್ಚಿತ್ತು. ಕಳೆದ ತಿಂಗಳು ಇದರ ಹಣದುಬ್ಬರ ಶೇ. 8.39ರಷ್ಟಿದೆ. ಇದು ಹಣದುಬ್ಬರ ಇಳಿಕೆಗೆ ಅನುವು ಮಾಡಿಕೊಟ್ಟಿದೆ. ಶೇ. 5.22ರ ದರವು ಆರ್ಬಿಐ ನಿಗದಿ ಮಾಡಿದ ಹಣದುಬ್ಬರ ತಾಳಿಕೆ ಮಿತಿಯಾದ ಶೇ. 6ರ ಒಳಗೆ ಬರುತ್ತದೆ.
ಡಿಸೆಂಬರ್ ತಿಂಗಳಲ್ಲಿ ಹಣದುಬ್ಬರ ಇಳಿಕೆ ಆಗುವುದು ನಿರೀಕ್ಷಿತವೇ ಆಗಿತ್ತು. ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಆಹಾರವಸ್ತುಗಳ ಬೆಲೆ ವಿಪರೀತ ಏರಿತ್ತು. ಅದಕ್ಕೆ ಹೋಲಿಸಿದರೆ ಡಿಸೆಂಬರ್ ತಿಂಗಳಲ್ಲಿ ಆಹಾರ ಉತ್ಪಾದನೆ ಉತ್ತಮವಾಗಿ ಆಗುವ ನಿರೀಕ್ಷೆ ಇತ್ತು. ಆರ್ಬಿಐ ಕೂಡ ಆಹಾರ ಹಣದುಬ್ಬರ ಡಿಸೆಂಬರ್ನಲ್ಲಿ ಕಡಿಮೆ ಆಗಬಹುದು. ಅದರ ಪರಿಣಾಮವಾಗಿ ಹಣದುಬ್ಬರವೂ ಕಡಿಮೆ ಆಗಬಹುದು ಎಂದು ಕಳೆದ ತಿಂಗಳೇ ಹೇಳಿತ್ತು.
ಕಳೆದ ತಿಂಗಳು ನಡೆದ ಎಂಪಿಸಿ ಸಭೆಯಲ್ಲಿ ಆರ್ಬಿಐ ಪ್ರಸಕ್ತ ಹಣಕಾಸು ವರ್ಷಕ್ಕೆ ಹಣದುಬ್ಬರ ಸಾಧ್ಯತೆಯನ್ನು ಶೇ. 4.8ರಿಂದ ಶೇ. 4.5ಕ್ಕೆ ಇಳಿಸಿದೆ.
Laxmi News 24×7