ಬೆಳಗಾವಿ : ಬೆಳಗಾವಿಯಲ್ಲಿ ಕೆಎಲ್ಇ ಸಂಸ್ಥೆಯು ಅತ್ಯಾಧುನಿಕ ಸೌಲಭ್ಯವುಳ್ಳ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಿದೆ. ಈ ಆಸ್ಪತ್ರೆ ನಿರ್ಮಾಣಕ್ಕೆ ಅಮೆರಿಕದಲ್ಲಿ ನೆಲೆಸಿರುವ ಬೆಳಗಾವಿ ಜಿಲ್ಲೆಯ ಪ್ರಸಿದ್ಧ ವೈದ್ಯರೊಬ್ಬರು 8 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಅವರ ಹೆಸರನ್ನೇ ಇಟ್ಟಿರುವ ಆ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ.
ಅಮೆರಿಕದಲ್ಲಿ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾರೆ ಸಂಪತ್ ಕುಮಾರ್. ಸದಾ ತಾಯ್ನಾಡಿಗೆ ಏನಾದರು ಮಾಡಬೇಕು ಎನ್ನುವ ಅವರಲ್ಲಿನ ತುಡಿತ ಈಗ ಬೆಳಗಾವಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಬರೋಬ್ಬರಿ 8 ಕೋಟಿ ದೇಣಿಗೆ ನೀಡುವಂತೆ ಮಾಡಿದೆ. ಇದಕ್ಕೆ “ಕೆಎಲ್ಇ ಡಾ. ಸಂಪತ್ಕುಮಾರ್ ಎಸ್. ಶಿವಣಗಿ ಕ್ಯಾನ್ಸರ್ ಆಸ್ಪತ್ರೆ” ಎಂದು ನಾಮಕರಣ ಮಾಡಲಾಗಿದೆ. ಅಲ್ಲದೇ ಅಥಣಿಯಲ್ಲಿ ಆಂಗ್ಲ ಮಾಧ್ಯಮ ಶಾಲೆಗೂ 1 ಕೋಟಿ ದೇಣಿಗೆ ನೀಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅದು ಇದೇ ಜ.10ರಂದು ಲೋಕಾರ್ಪಣೆ ಆಗುತ್ತಿದೆ.ಹೆಸರಿನಲ್ಲಿ ಹೇಗೆ ಸಂಪತ್ತು ಇದೇಯೋ ಅದೇ ರೀತಿ ಹಣ, ಜ್ಞಾನ ಮತ್ತು ಹೃದಯ ಶ್ರೀಮಂತಿಕೆ ಇವರಲ್ಲಿ ಮೇಳೈಸಿದೆ. ಇವರಲ್ಲಿನ ಅಪ್ರತಿಮ ಪ್ರತಿಭೆಗೆ ವಿಶ್ವದ ದೊಡ್ಡಣ್ಣನೇ ಬಿಗಿದಪ್ಪಿಕೊಂಡಿದ್ದಾನೆ. ಡಾ. ಸಂಪತ್ಕುಮಾರ್ ಅಮೆರಿಕದ ಹಲವು ಅಧ್ಯಕ್ಷರ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದರು. ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅತ್ಯಾಪ್ತರಲ್ಲಿ ಇವರೂ ಒಬ್ಬರು. ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಹೆಗ್ಗಳಿಕೆ ಇವರದ್ದು ಎಂದು ಅಲ್ಲಿನ ಮಾಧ್ಯಮಗಳೇ ಸುದ್ದಿ ಪ್ರಕಟಿಸಿವೆ ಎನ್ನುತ್ತಾರೆ ಹಿರಿಯ ಸಾಹಿತಿ ಸರೂಜು ಕಾಟ್ಕರ್.