ಘಟಪ್ರಭಾ:ಜಿಲ್ಲೆಯ ಅತ್ಯಂತ ಮಧ್ಯವರ್ತಿ ಸ್ಥಳವಾಗಿರುವ ಘಟಪ್ರಭಾ ಹಲವಾರು ತಾಲೂಕುಗಳ ಕೇಂದ್ರ ಸ್ಥಾನವಾಗಿದ್ದು ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್ ಪ್ರೈಸ್ ರೈಲು ನಿಲುಗಡೆಯಿಂದ ವೇಗದ ಪ್ರಯಾಣ ಒದಗಿಸುವ ಜೊತೆಗೆ ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡುತ್ತದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಗುರುವಾರ ಜ-02 ರಂದು ಘಟಪ್ರಭಾ ರೈಲ್ವೆ ನಿಲ್ದಾಣದಲ್ಲಿ ಹುಬ್ಬಳ್ಳಿ-ಪುಣೆ ವಂದೇ ಭಾರತ ಎಕ್ಸ್ ಪ್ರೈಸ್ ರೈಲಿನ ನಿಲುಗಡೆ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಂದೇ ಭಾರತ ರೈಲಿಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ವಂದೇ ಭಾರತ ರೈಲು ನಿಲುಗಡೆಯಿಂದ ಪುಣೆ ಹಾಗೂ ಹುಬ್ಬಳ್ಳಿಗೆ ಪ್ರಯಾಣಿಸುವ ವ್ಯಾಪಾರಸ್ಥರಿಗೆ, ವೃತ್ತಿಪರರು ಹಾಗೂ ಸಾಮಾನ್ಯ ಪ್ರಯಾಣಿಕರಿಕೆ ಅನುಕೂಲವಾಗಲಿದೆ. ಇನ್ನು ಮುಂದೆ ಪ್ರತಿದಿನ 2 ನಿಮಿಷಗಳ ಕಾಲ ನಿಲುಗಡೆಯಾಗಲಿದೆ ಎಂದರು.
ಬೆಳಗಾವಿ ಮಿರಜ್ ನಡುವೆ ಘಟಪ್ರಭಾ ಅತಿದೊಡ್ಡ ರೈಲು ನಿಲ್ದಾಣವಾಗಿದ್ದು, ಈ ರೈಲು ನಿಲ್ದಾಣದ ಅಭಿವೃದ್ದಿಗೆ ಕೇಂದ್ರ ಸರ್ಕಾರವು ಅಮೃತ ಭಾರತ ನಿಲ್ದಾಣ ಯೋಜನೆಯಡಿ 18.2 ಕೋಟಿ ರೂಪಾಯಿ ಅನುದಾನದಲ್ಲಿ ಪುನರಾಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ ಎಂದರಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆಯಡಿ ಘಟಪ್ರಭಾ ರೈಲು ನಿಲ್ದಾಣ ಆಯ್ಕೆ ಮಾಡಿ ಯೋಜನೆಗೆ ಚಾಲನೆ ನೀಡಿದ್ದಾರೆ. ಈಗಾಗಲೇ ಪಂಡರಪುಕ್ಕೆ ಹೋಗುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಯಶವಂತಪುರ-ಪಂಡರಪೂರ ರೈಲನ್ನು ಘಟಪ್ರಭಾ ಮತ್ತು ರಾಯಬಾಗ ನಿಲ್ದಾಣಗಳಿಗೆ ನಿಲುಗಡೆಯಾಗುತ್ತಿದೆ ಎಂದರು.