ಬೆಳಗಾವಿ: ಭಾರತೀಯ ರೈಲ್ವೆಯ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಬಹಳ ಬೇಡಿಕೆ ಇದೆ. ಕರ್ನಾಟಕದ ವಿವಿಧ ನಗರಗಳಿಗೆ ಈ ರೈಲು ಸಂಪರ್ಕ ಬೇಕು ಎಂದು ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಲಾಗುತ್ತಿದೆ. ಸದ್ಯ ರಾಜ್ಯದಲ್ಲಿ ಮತ್ತೊಂದು ವಂದೇ ಭಾರತ್ ರೈಲು ಸಂಚಾರ ಆರಂಭಿಸುವ ನಿರೀಕ್ಷೆ ಇದೆ. ಈಗಾಗಲೇ ರೈಲ್ವೆ ಇಲಾಖೆ ಇದಕ್ಕೆ ಒಪ್ಪಿಗೆ ನೀಡಿದ್ದು, 2025ರಲ್ಲಿ ಈ ರೈಲು ಸಂಚಾರ ಆರಂಭವಾಗುವ ಸಾಧ್ಯತೆ ಇದೆ.
ಹೊಸ ವಂದೇ ಭಾರತ್ ರೈಲು ಕುಂದಾನಗರಿ ಬೆಳಗಾವಿಗೆ ಸಂಪರ್ಕ ಕಲ್ಪಿಸುತ್ತದೆ. ಈಗಾಗಲೇ ಹುಬ್ಬಳ್ಳಿ-ಪುಣೆ ನಡುವಿನ ವಂದೇ ಭಾರತ್ ರೈಲು ಬೆಳಗಾವಿ ಮೂಲಕ ಸಂಚಾರ ನಡೆಸುತ್ತಿದ್ದು, ಅಲ್ಲಿ ನಿಲುಗಡೆಯೂ ಇದೆ. ಈಗ ಮತ್ತೊಂದು ವಂದೇ ಭಾರತ್ ರೈಲು ಪುಣೆ-ಬೆಳಗಾವಿ ನಡುವೆ ಶೀಘ್ರದಲ್ಲೇ ಸಂಚಾರವನ್ನು ಆರಂಭಿಸಲಿದೆ.
ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ವಂದೇ ಭಾರತ್ ರೈಲನ್ನು ಬೆಳಗಾವಿಗೆ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆ ಇದೆ. ಈ ಸಂಚಾರಕ್ಕೆ ರೈಲ್ವೆ ಇಲಾಖೆ ಒಪ್ಪಿಗೆ ನೀಡಿ, 2023ರ ನವೆಂಬರ್‌ನಲ್ಲಿಯೇ ಪ್ರಾಯೋಗಿಕ ಸಂಚಾರ ಮುಗಿದಿದೆ. ಆದರೆ 2024 ಕಳೆಯುತ್ತಾ ಬಂದರೂ ಬೆಂಗಳೂರು-ಬೆಳಗಾವಿ ನಡುವಿನ ವಂದೇ ಭಾರತ್ ರೈಲು ಸಂಚಾರ ಇನ್ನೂ ಆರಂಭವಾಗಿಲ್ಲ.
ಪುಣೆ-ಬೆಳಗಾವಿ ವಂದೇ ಭಾರತ್ ರೈಲು: ಮಾಹಿತಿಗಳ ಪ್ರಕಾರ ಪುಣೆಗೆ ನಾಲ್ಕು ವಂದೇ ಭಾರತ್ ರೈಲುಗಳು ಶೀಘ್ರದಲ್ಲಿಯೇ ಲಭ್ಯವಾಗಲಿದೆ. ನಾಲ್ಕು ಮಾರ್ಗದಲ್ಲಿ ಈ ರೈಲುಗಳನ್ನು ಓಡಿಸಲು ಈಗಾಗಲೇ ತಯಾರಿ ನಡೆಸಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಳ್ಳಲಾಗುತ್ತಿದೆ.
ನಾಲ್ಕು ರೈಲುಗಳು ಪುಣೆ-ಶೇಗಾಂವ್, ಪುಣೆ-ಸಿಕಂದರಾಬಾದ್, ಪುಣೆ-ವಡೋದರ ಮತ್ತು ಪುಣೆ-ಬೆಳಗಾವಿ ನಡುವೆ ಸಂಚಾರವನ್ನು ನಡೆಸಲಿದೆ. ಕರ್ನಾಟಕದ ಗಡಿ ಜಿಲ್ಲೆಯಾದ ಬೆಳಗಾವಿ-ಪುಣೆ ನಡುವೆ ನಿತ್ಯ ನೂರಾರು ಜನರು ಸಂಚಾರವನ್ನು ನಡೆಸುತ್ತಾರೆ. ವಂದೇ ಭಾರತ್ ರೈಲು ಸೇವೆ ಆರಂಭವಾದರೆ ಇವರಿಗೆ ಸಹಾಯಕವಾಗಲಿದೆ.
ಸದ್ಯ ನೈಋತ್ಯ ರೈಲ್ವೆ ಓಡಿಸುತ್ತಿರುವ ಹುಬ್ಬಳ್ಳಿ-ಪುಣೆ ನಡುವಿನ ವಂದೇ ಭಾರತ್ ರೈಲು ಬೆಳಗಾವಿ ಮೂಲಕ ಸಂಚಾರ ನಡೆಸುತ್ತದೆ. ಆದರೆ ಈ ರೈಲು ವಾರದಲ್ಲಿ ಮೂರು ದಿನ ಮಾತ್ರ ಸಂಚಾರ ನಡೆಸುತ್ತದೆ. ಆದ್ದರಿಂದ ಪುಣೆ-ಬೆಳಗಾವಿ ನಡುವಿನ ಹೊಸ ರೈಲು ಉಳಿದ ದಿನ ಸಂಚಾರ ನಡೆಸುವ ನಿರೀಕ್ಷೆ ಇದೆ.
ಮಹಾರಾಷ್ಟ್ರ ರಾಜ್ಯದ ಪುಣೆ ಮತ್ತು ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿ ನಡುವಿನ ವಂದೇ ಭಾರತ್ ರೈಲು ಸಂಚಾರ ಇನ್ನೂ ಪ್ರಸ್ತಾವನೆಯ ಹಂತದಲ್ಲಿದೆ. ನಿಲ್ದಾಣಗಳು, ವೇಳಾಪಟ್ಟಿ, ದರಗಳು ಇನ್ನೂ ಅಂತಿಮವಾಗಿಲ್ಲ. ರೈಲ್ವೆ ಇಲಾಖೆ ಪುಣೆಗೆ 4 ವಂದೇ ಭಾರತ್ ರೈಲು ನೀಡಿದ ಬಳಿಕ ಪುಣೆ-ಬೆಳಗಾವಿ ವಂದೇ ಭಾರತ್ ರೈಲು ಸಂಚಾರ ಯಾವಾಗ? ಎಂಬ ಮಾಹಿತಿ ಲಭ್ಯವಾಗಲಿದೆ.
ಈ ನಡುವೆ ಹುಬ್ಬಳ್ಳಿ-ಪುಣೆ ನಡುವಿನ ವಂದೇ ಭಾರತ್ ರೈಲಿಗೆ ಬೆಳಗಾವಿಯ ಘಟಪ್ರಭಾದಲ್ಲಿ ಒಂದು ನಿಲುಗಡೆ ನೀಡಲು ರೈಲ್ವೆ ಇಲಾಖೆ ಒಪ್ಪಿಗೆ ನೀಡಿತ್ತು. ಈ ಕುರಿತು ಈಗ ಅಧಿಕೃತ ಆದೇಶ ಪ್ರಕಟವಾಗಿದ್ದು, ಜನವರಿ 3 ರಿಂದ ರೈಲು ಘಟಪ್ರಭಾದಲ್ಲಿ ನಿಲುಗಡೆಗೊಳ್ಳಲಿದೆ.