Breaking News

ಬೆಳಗಾವಿ: ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಯುವಕ ಸಾವು

Spread the love

ಬೆಳಗಾವಿ: ಪಾರ್ಟಿ ಮಾಡಲು ಹೋಗಿದ್ದಾಗ ಈಜುಕೊಳದಲ್ಲಿ ಮುಳುಗಿ ಯುವಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿ ಬಳಿಯ ಖಾಸಗಿ ರೆಸಾರ್ಟ್‌ನಲ್ಲಿ ಭಾನುವಾರ ನಡೆದಿದೆ.

ಬೆಳಗಾವಿಯ ಖಾಸಬಾಗ ನಿವಾಸಿ ಮಹಾಂತೇಶ ಗುಂಜೀಕರ (26) ಮೃತ ಯುವಕ. ಎಲ್‌ಜಿ ಕಂಪನಿಯಲ್ಲಿ ಮಹಾಂತೇಶ ಉದ್ಯೋಗಿಯಾಗಿದ್ದ. ಕಂಪನಿಯ ಬೆಳಗಾವಿ ಶಾಖೆಯ 22 ಜ‌ನ ಸಿಬ್ಬಂದಿ ನಿನ್ನೆ ಸಂಜೆ ಕಣಕುಂಬಿ ಬಳಿಯ ಖಾಸಗಿ ರೆಸಾರ್ಟ್‌ಗೆ ತೆರಳಿದ್ದರು. ಇಂದು ಇವರೆಲ್ಲಾ ಮನೆಗೆ ಮರಳಬೇಕಿತ್ತು. ಭಾನುವಾರ ಬೆಳಗ್ಗೆ ರೆಸಾರ್ಟ್​​ನ ‌ಈಜುಕೊಳದಲ್ಲಿ ಈಜಲು ಮಹಾಂತೇಶ ಇಳಿದಿದ್ದಾರೆ. ಆ ವೇಳೆ ನೀರಿನಲ್ಲಿ ಮುಳುಗಿ ಮಹಾಂತೇಶ ‌ಗುಂಜೀಕರ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

 

ಮಹಾಂತೇಶ ಮೃತದೇಹವನ್ನು ಬೆಳಗಾವಿಯ ಜಿಲ್ಲಾಸ್ಪತ್ರೆ ತರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಫೆಬ್ರುವರಿಯಲ್ಲಿ ಸಹೋದರಿಯ ಮದುವೆ ಮಾಡಲು ಮಹಾಂತೇಶ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಖಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇತ್ತೀಚಿನ ಘಟನೆ; ಕಳೆದ ನವೆಂಬರ್​ ತಿಂಗಳಲ್ಲಿ ಮೈಸೂರಿನಿಂದ ಮಂಗಳೂರಿನ ಉಳ್ಳಾಲಕ್ಕೆ ಬೀಚ್​ ಪ್ರವಾಸಕ್ಕೆ ತೆರಳಿದ್ದ ಮೂವರು ಯುವತಿಯರು ರೆಸಾರ್ಟ್‌ನಲ್ಲಿ ತಂಗಿದ್ದರು. ಅಂದು ಬೆಳಗ್ಗೆ ಮೂವರೂ ಈಜುಕೊಳಕ್ಕೆ ಇಳಿದಿದ್ದರು. ಇದರ ವಿಡಿಯೋ ಸೆರೆ ಹಿಡಿಯಲು ತಮ್ಮ ಮೊಬೈಲ್​ ಅನ್ನು ರೆಕಾರ್ಡ್ ಮೋಡ್‌ನಲ್ಲಿಟ್ಟಿದ್ದರು. ಮೂವರು ಯುವತಿಯರು ಕೊಳಕ್ಕೆ ಇಳಿದಾಗ ಒಬ್ಬಾಕೆ ಟ್ಯೂಬ್​ ತೆಗೆದುಕೊಳ್ಳಲು ಸ್ವಲ್ಪ ಮುಂದಕ್ಕೆ ತೆರಳಿದ್ದು, ಈ ವೇಳೆ ನೀರಿನಲ್ಲಿ ದಿಢೀರ್‌ ಒದ್ದಾಡಿದ್ದಳು. ಆಗ ಆಕೆಯನ್ನು ರಕ್ಷಿಸಲು ಮತ್ತೊಬ್ಬಾಕೆ ಮುಂದೆ ಹೋಗಿ ಹಿಡಿಯುತ್ತಿದ್ದಂತೆ ಆಕೆಯೂ ನೀರಿನಿಂದ ಮೇಲೆ ಬರಲಾರದೇ ಇಕ್ಕಟ್ಟಿಗೆ ಸಿಲುಕಿದ್ದಳು. ಈ ವೇಳೆ ಮೂರನೇ ಯುವತಿ ಕೂಡ ಅವರಿಬ್ಬರ ರಕ್ಷಣೆಗೆ ತೆರಳಿದ್ದು ಆಕೆಯೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಳು. ಹೀಗೆ ಮೂವರು ಯುವತಿಯರ ಪ್ರಾಣಪಕ್ಷಿ ಹಾರಿಹೋಗಿತ್ತು. ಇದಕ್ಕೂ ಮುನ್ನ ಇವರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ವಿಡಿಯೋ ರೆಸಾರ್ಟ್‌ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ರೆಸಾರ್ಟ್​​ಗೆ ಬೀಗಮುದ್ರೆ ಹಾಕಿದ್ದ ಪೊಲೀಸರು: ಘಟನೆಗೆ ಸಂಬಂಧಿಸಿದಂತೆ ಸೋಮೇಶ್ವರದ VAZCO ಬೀಚ್ ರೆಸಾರ್ಟ್​​ಗೆ ಅಧಿಕಾರಿಗಳು ಬೀಗಮುದ್ರೆ ಹಾಕಿದ್ದರು. ಈ ರೆಸಾರ್ಟ್​​ನ ಟ್ರೇಡ್ ಲೈಸನ್ಸ್ ಮತ್ತು ಟೂರಿಸಂ ಪರವಾನಿಗೆಯನ್ನು ಅಮಾನತ್ತಿನಲ್ಲಿಡಲಾಗಿದೆ ಎಂದು ಮಂಗಳೂರು ಉಪವಿಭಾಗಾಧಿಕಾರಿ ಹರ್ಷವರ್ಧನ ತಿಳಿಸಿದ್ದರು.

 

 


Spread the love

About Laxminews 24x7

Check Also

ಇವತ್ತು ನೀರು ಕಡಿಮೆಯಾಗುತ್ತೆ:ಉಪವಿಭಾಗಧಿಕಾರಿ ಸುಭಾಷ ಸಂಪಗಾವಿ ನದಿತೀರದ ಜನರಲ್ಲಿ ಅಭಯ

Spread the love ಇವತ್ತು ನೀರು ಕಡಿಮೆಯಾಗುತ್ತೆ:ಉಪವಿಭಾಗಧಿಕಾರಿ ಸುಭಾಷ ಸಂಪಗಾವಿ ನದಿತೀರದ ಜನರಲ್ಲಿ ಅಭಯ ಚಿಕ್ಕೋಡಿ: ಕೃಷ್ಣಾ ಸೇರಿದಂತೆ ದೂಧಗಂಗಾ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ