ಬೆಂಗಳೂರು: ಹೊಸ ವರ್ಷಾಚರಣೆಗೆ ರಾಜಧಾನಿ ಬೆಂಗಳೂರು ಸಜ್ಜಾಗುತ್ತಿರುವ ಬೆನ್ನಲ್ಲೇ ಮಾದಕ ದಂಧೆಕೋರರ ಮೇಲೆ ಪೊಲೀಸರು ಕಣ್ಣಿಟ್ಟಿದ್ದು, 8 ಜನ ಆರೋಪಿಗಳನ್ನು ಬಂಧಿಸಲಾಗಿದೆ.
ಬೆಂಗಳೂರು ನಗರವನ್ನು ಸಂಪರ್ಕಿಸುವ ಗಡಿ ಭಾಗಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ, ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ಈ ನಡುವೆ ರೈಲುಗಳ ಮೂಲಕ ನಗರಕ್ಕೆ ಗಾಂಜಾ ಪೂರೈಸುತ್ತಿದ್ದ ಪ್ರತ್ಯೇಕ 5 ಪ್ರಕರಣಗಳಲ್ಲಿ 8 ಜನರನ್ನು ರಾಜ್ಯ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
![]()
ಅಲ್ಲದೇ, ಆರೋಪಿಗಳಿಂದ ಸರಿಸುಮಾರು 86 ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ ಮಾಡಿರುವುದಾಗಿ ರಾಜ್ಯ ರೈಲ್ವೆ ಪೊಲೀಸ್ ಎಸ್ಪಿ ಡಾ. ಸೌಮ್ಯಲತಾ ಎಸ್.ಕೆ. ಮಾಹಿತಿ ನೀಡಿದ್ದಾರೆ.ಆರೋಪಿಗಳು ಜಾರ್ಖಂಡ್ ಹಾಗೂ ಒಡಿಶಾ ಮೂಲದವರಾಗಿದ್ದಾರೆ. ರಸ್ತೆ ಮಾರ್ಗಗಳ ಮೂಲಕ ಮಾದಕ ಪದಾರ್ಥಗಳನ್ನು ತಂದರೆ ಸಿಕ್ಕಿಬೀಳುವ ಭಯದಿಂದ, ಪೊಲೀಸ್ ಶ್ವಾನಗಳಿಗೂ ವಾಸನೆ ತಿಳಿಯದಂತೆ ಪ್ಯಾಕ್ ಮಾಡಿ ನಗರಕ್ಕೆ ಗಾಂಜಾ ತರುತ್ತಿದ್ದರು.
ಮಾದಕ ದಂಧೆಕೋರರ ವಿರುದ್ಧ ಡಿಸೆಂಬರ್ ಮೊದಲ ವಾರದಿಂದಲೇ ವಿಶೇಷ ಕಾರ್ಯಾಚರಣೆ ಆರಂಭಿಸಿರುವ ರೈಲ್ವೆ ಪೊಲೀಸರು ಪ್ರಶಾಂತಿ ಎಕ್ಸ್‌ಪ್ರೆಸ್ ಹಾಗೂ ಹಟಿಯಾ ಎಕ್ಸ್‌ಪ್ರೆಸ್ ರೈಲುಗಳಲ್ಲಿ ತಲಾಶ್ ನಡೆಸಿದ್ದಾರೆ. ಈ ವೇಳೆ ಟ್ರ್ಯಾಲಿ ಬ್ಯಾಗ್‌ಗಳಲ್ಲಿ ಗಾಂಜಾ ತುಂಬಿಸಿ ತರುತ್ತಿರುವುದು ಪತ್ತೆಯಾಗಿದೆ. ಬಂಧಿತರ ವಿಚಾರಣೆ ಮುಂದುವರೆಸಲಾಗಿದ್ದು, ಅವರ ಸಂಪರ್ಕದಲ್ಲಿದ್ದವರ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Laxmi News 24×7