ಬೆಳಗಾವಿ: 39ನೇ ಕಾಂಗ್ರೆಸ್ ಅಧಿವೇಶನಕ್ಕೆ ಸಾಕ್ಷಿಯಾಗಿದ್ದ ಬೆಳಗಾವಿ ವೀರಸೌಧ ಶತಮಾನೋತ್ಸವ ಆಚರಣೆಗೆ ಸಿದ್ಧಗೊಳ್ಳುತ್ತಿದೆ. ಸೌಧವು ಅಂದ-ಚೆಂದವಾಗುತ್ತಿದ್ದು, ಇಲ್ಲಿ ನೂತನವಾಗಿ ಅಳವಡಿಸಿರುವ ಗಾಂಧೀಜಿ ಡಿಜಿಟಲ್ ಫೋಟೋ ಗ್ಯಾಲರಿ ಎಲ್ಲರ ಗಮನ ಸೆಳೆಯಲಿದೆ. ಐತಿಹಾಸಿಕ ಸಮಾರಂಭಕ್ಕೆ ಹೇಗೆಲ್ಲ ನಡೆದಿದೆ ತಯಾರಿ ಎಂಬ ಕುತೂಹಲವೇ….. ಹಾಗಾದ್ರೆ ಈಟಿವಿ ಭಾರತ ವಿಶೇಷ ವರದಿ ಇಲ್ಲಿದೆ ನೋಡಿ.
1924ರ ಡಿ.26, 27ರಂದು ಎರಡು ದಿನಗಳ ಕಾಲ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಆ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ಮಹಾತ್ಮಾ ಗಾಂಧೀಜಿ. ಬಾಪೂಜಿ ಅಧ್ಯಕ್ಷತೆ ವಹಿಸಿದ ಏಕೈಕ ಅಧಿವೇಶನ ಇದು. ಬೆಳಗಾವಿ ಟಿಳಕವಾಡಿ ಪ್ರದೇಶದ ಸ್ಥಳದಲ್ಲಿ ವಿಜಯನಗರ ಎಂದು ನಾಮಕರಣ ಮಾಡಿದ್ದ ಜಾಗದಲ್ಲಿ ಅಧಿವೇಶನ ಜರುಗಿತ್ತು. ಅಲ್ಲಿಯೇ ಬಾವಿಯೊಂದನ್ನು ನಿರ್ಮಿಸಲಾಗಿತ್ತು. ಈಗಲೂ ಅದು ಅಧಿವೇಶನಕ್ಕೆ ಸಾಕ್ಷಿಯಾಗಿ ನಿಂತಿದೆ.